ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಯೋಜನೆಗಳ ಅನುಮೋದನೆಗಾಗಿ ಮನವಿ ಮಾಡಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ (Narendra Modi) ಅವರೊಂದಿಗೆ ಕಾಂಗ್ರೆಸ್ ನಾಯಕರು ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಮನವಿ ಮಾಡಿದ್ದಾರೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚಿಸಿದ್ದೇವೆ. ರಾಜ್ಯಕ್ಕೆ ಅವಶ್ಯವಿರುವ ಯೋಜನೆಗಳ ಕುರಿತು ಮನವಿ ಮಾಡಿದ್ದೇವೆ. ಸಿಎಂ ವಿವರಣೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಭದ್ರಾ ಮೇಲ್ದಂಡೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಮಹದಾಯಿ, ಬೆಂಗಳೂರು ಅಭಿವೃದ್ಧಿ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇವೆ. ನಾವು ಹೆಚ್ಚು ತೆರಿಗೆ ನೀಡುತ್ತೇವೆ ಎಂದು ವಿವರಣೆ ನೀಡಿದ್ದೇವೆ. ಗುಜರಾತ್ ನಲ್ಲಿ ಇರುವಂತೆ ಗಿಫ್ಟ್ ಸಿಟಿ ನಮಗೂ ಬೇಕೆಂದು ಬೇಡಿಕೆ ಇಡಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಭೇಟಿ ನಂತರ ಟ್ವೀಟ್ ಮಾಡಿದ್ದು, ಕರ್ನಾಟಕದ ಅಭಿವೃದ್ಧಿಯ ಪ್ರಮುಖ ಬೇಡಿಕೆಗಳು ಮತ್ತು ಆದ್ಯತೆಗಳ ಪ್ರಸ್ತಾವನೆ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದೇವೆ. ನಮ್ಮ ರಾಜ್ಯದ ಪ್ರಗತಿಯನ್ನು ಮುನ್ನಡೆಸಲು ಸಕಾರಾತ್ಮಕ ಸಹಯೋಗವನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
