ಬೆಂಗಳೂರು: ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಇತ್ತೀಚೆಗಷ್ಟೇ ಬೆಂಗಳೂರಿಗರಿಗೆ ನಮ್ಮ ಮೆಟ್ರೋ ದರ ಏರಿಕೆಯ ಬಿಸಿ ತಟ್ಟಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ದರ ಇಳಿಕೆಗೆ ಸೂಚನೆ ನೀಡಿದ್ದಾರೆ.
ಮೆಟ್ರೋ ದರ ಏರಿಸಿರುವ ಹಿನ್ನೆಲೆಯಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನಮ್ಮ ಮೆಟ್ರೋ ಪ್ರಯಾಣ ದರ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್)ಕ್ಕೆ ಸೂಚನೆ ನೀಡಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಸಿಎಂ, ದರ ಏರಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ? ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ’ ಎಂದು ತಿಳಿಸಿದ್ದಾರೆ.
‘ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ’ ಎಂದು ಹೇಳಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಇಳಿಕೆಯಾಗಿದೆ. ರಾಜ್ಯ ರಾಜಧಾನಿಯ ನರನಾಡಿಯಂತಿರುವ ಮೆಟ್ರೋ ರೈಲುಗಳ ಬೆಲೆಯೇರಿಕೆಯಾಗಿದೆ. ಟಿಕೆಟ್ ದರವನ್ನು ಶೇ.45ರಿಂದ ಶೇ.100ರಷ್ಟು ಏರಿಕೆ ಮಾಡಿದ ಕಾರಣ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಭಾರಿ ಪ್ರಮಾಣದಲ್ಲಿ ಬೆಲೆಯೇರಿಕೆ ಮಾಡಿದ ಬಿಎಂಆರ್ ಸಿಎಲ್ ಗೆ ರಾಜಧಾನಿಯ ಜನ ಭಾರಿ ಪೆಟ್ಟು ಕೊಟ್ಟಿದ್ದಾರೆ. ಬೆಲಯೇರಿಕೆ ಬಳಿಕ ನಮ್ಮ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಂಠಿತವಾಗಿದ್ದು, ಆದಾಯಕ್ಕೆ ಕೊಡಲಿ ಏಟು ಬಿದ್ದಿದೆ.
ಬೆಲೆಯೇರಿಕೆಗೂ ಮೊದಲು ಬಿಎಂಆರ್ ಸಿಎಲ್ ಗೆ ನಮ್ಮ ಮೆಟ್ರೋ ರೈಲುಗಳಿಂದ ಪ್ರತಿ ದಿನ 2ರಿಂದ 2.5 ಕೋಟಿ ರೂ.ವರೆಗೆ ಆದಾಯ ಲಭಿಸುತ್ತಿತ್ತು. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾದ ಕಾರಣ ದಿನಕ್ಕೆ ಈಗ ಒಂದೂವರೆಯಿಂದ ಎರಡು ಕೋಟಿ ರೂ. ಮಾತ್ರ ಆದಾಯ ಲಭಿಸುತ್ತಿದೆ. ಬೆಲೆಯೇರಿಕೆ ಬಳಿಕ ದಿಢೀರನೆ ಪ್ರಯಾಣಿಕರ ಸಂಖ್ಯೆ ಕುಸಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.
ಮೆಟ್ರೋ ಟಿಕೆಟ್ ಬೆಲೆಯೇರಿಕೆ ಮಾಡುವ ಮೊದಲು ಅಂದರೆ, ಫೆಬ್ರವರಿ 8ರಂದು 8.07 ಲಕ್ಷ ಜನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಆದರೆ, ಬೆಲೆಯೇರಿಕೆಯ ನಂತರದ ದಿನವಾದ ಫೆ.9ರಂದು ಪ್ರಯಾಣಿಕರ ಸಂಖ್ಯೆ 6 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ನಮ್ಮ ಮೆಟ್ರೋದ ಆದಾಯದಲ್ಲಿ ಶೇ.35-40ರಷ್ಟು ಕುಂಠಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮೆಟ್ರೋ ಟಿಕೆಟ್ ದರವು ಮಿತಿಯಲ್ಲಿದ್ದ ಕಾರಣ ಹೆಚ್ಚಿನ ಜನ ಬೈಕ್, ಕಾರುಗಳನ್ನು ಬಿಟ್ಟು, ಮೆಟ್ರೋದಲ್ಲಿಯೇ ಪ್ರಯಾಣಿಸುತ್ತಿದ್ದರು. ಇದರಿಂದ ಅವರಿಗೆ ಸಮಯವೂ ಉಳಿಯುತ್ತಿತ್ತು. ಆದರೆ, ಈಗ ಮೆಟ್ರೋ ಬೆಲೆಯು ದುಪ್ಪಟ್ಟಾಗಿರುವ ಕಾರಣ ಬೈಕ್ ಗಳಲ್ಲಿಯೇ ಕಚೇರಿಗಳಿಗೆ ತೆರಳುವುದು ಅಥವಾ ಬಸ್ ಗಳಲ್ಲಿ ಸಂಚರಿಸುವುದೇ ಒಳಿತು ಎಂಬ ನಿರ್ಧಾರಕ್ಕೆ ಪ್ರಯಾಣಿಕರು ಬಂದಿದ್ದಾರೆ. ಇದೇ ಕಾರಣಕ್ಕಾಗಿ ಮೆಟ್ರೋಗಳಲ್ಲಿ ಸಂಚರಿಸುವವರ ಪ್ರಮಾಣ ಗಣನೀಯವಾಗಿ ಕುಸಿದಿದೆ ಎನ್ನಲಾಗಿದೆ.