ಬೆಂಗಳೂರು: ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ತಾಯ್ನಾಡಿಗೆ ಭಾನುವಾರ ಆಗಮಿಸಿರುವ ನಟ ಶಿವರಾಜಕುಮಾರ್ ಆರೋಗ್ಯವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ವಿಚಾರಿಸಿದ್ದಾರೆ.
ಇಂದು ನಟ ಶಿವರಾಜ್ ಕುಮಾರ್ (ShivarajKumar) ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಆರೋಗ್ಯ (Health) ವಿಚಾರಿಸಿದರು. ಬಾಗಿಲು ಬಳಿ ಬಂದ ನಟ ಶಿವಣ್ಣ, ಸಿಎಂ ಸಿದ್ದರಾಮಯ್ಯರನ್ನು ಸ್ವಾಗತಿಸಿದರು. ಅಲ್ಲದೇ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಸಿಎಂ, ಶಿವರಾಜಕುಮಾರ್ ಅವರು ಶಸ್ತ್ರಚಿಕಿತ್ಸೆ ನಂತರ ಹಿಂತಿರುಗಿ ಬಂದಿದ್ದಾರೆ. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಮನೆಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದರು. ಈಗ ಮುಂದಿನ ತಿಂಗಳಿನಿಂದ ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಜೊತೆ ಭೈರತಿ ಸುರೇಶ್ ಕೂಡ ಇದ್ದರು. ಮೂತ್ರಕೋಶದ ಕ್ಯಾನ್ಸರ್ ಸಂಬಂಧ ಆಪರೇಷನ್ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್ ಡಿ.18 ರಂದು ಅಮೆರಿಕಕ್ಕೆ ತೆರಳಿದ್ದರು. ಡಿ.24 ರಂದು ಆಪರೇಷನ್‌ಗೆ ಒಳಗಾಗಿದ್ದು, ಈಗ ಸಂಪೂರ್ಣ ಗುಣಮುಖರಾಗಿ ಮರಳಿದ್ದಾರೆ.