ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ/ಪುನರ್‌ರಚನೆ ಹಿನ್ನೆಲೆಯಲ್ಲಿ ಉದ್ಭವವಾಗಿರುವ ‘ನವೆಂಬರ್ ಕ್ರಾಂತಿ’ ವದಂತಿ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ನ.15ರಂದು ದೆಹಲಿಗೆ ತೆರಳಲಿದ್ದು, ಮೂರು ದಿನ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಈ ಪ್ರವಾಸ ಸಂಪುಟ ಸರ್ಜರಿ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನ.14ರಂದು ಪ್ರಕಟವಾಗಲಿದ್ದು, ಅದಾದ ಮರುದಿನವೇ ಅಂದರೆ ನ.15ರಂದು ಸಿದ್ದರಾಮಯ್ಯ ಅವರು ದೆಹಲಿಗೆ ಹಾರಲಿದ್ದು, 2-3 ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ. ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಕಚೇರಿ ಹೇಳಿದೆ.
ಆದರೆ, ಪುಸ್ತಕ ಬಿಡುಗಡೆಗೆ ತೆರಳಲಿರುವವರು ಮೂರು ದಿನ ಅಲ್ಲೇ ಉಳಿದುಕೊಳ್ಳುವ ಚಿಂತನೆಯನ್ನೂ ಹೊಂದಿರುವುದರಿಂದ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಈ ಅವಧಿಯಲ್ಲಿ ನಡೆಯಲಿದೆ ಎಂದೇ ಹೇಳಲಾಗುತ್ತಿದೆ.
ಈ ಮೂರು ದಿನಗಳ ಭೇಟಿ ವೇಳೆ ಹೈಕಮಾಂಡ್ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ಸಂಪುಟ ವಿಸ್ತರಣೆ/ಪುನರ್ ರಚನೆ ಕುರಿತು ಮಹತ್ವದ ಮಾತುಕತೆ ನಡೆಯಲಿದೆ ಎಂದೇ ಮೂಲಗಳು ಹೇಳುತ್ತಿವೆ. ಇದೇ ವೇಳೆ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ನಾಯಕರಿಂದ ಕೇಳಿ ಬಂದಿರುವ ಅನಗತ್ಯ ಹೇಳಿಕೆಗಳ ಬಗ್ಗೆಯೂ ಹೈಕಮಾಂಡ್‌ನೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ : ಬೀದಿ ನಾಯಿಗಳ ಬಗ್ಗೆ ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ‘ಸುಪ್ರೀಂ’ ಛೀಮಾರಿ!



















