ಬೆಂಗಳೂರು: ಪೌರಕಾರ್ಮಿಕರನ್ನು ಪ್ರಸ್ತುತ ಖಾಯಂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 9 ಸಾವಿರದಷ್ಟಿರಬಹುದಾದ ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್ ಗಳನ್ನು ಕೂಡ ಖಾಯಂ ಮಾಡಲಾಗುವುದು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಿಬಿಎಂಪಿ ವತಿಯಿಂದ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಮದ್ಯವರ್ತಿಗಳ ಹಾವಳಿಯಿಂದ ಪೌರಕಾರ್ಮಿಕರು ಮುಕ್ತ
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಪೌರಕಾರ್ಮಿಕರನ್ನು ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದು, ನ್ಯಾಯಯುತವಾದ ಸಂಬಳ ಕೊಡದೇ ಇದ್ದುದ್ದನ್ನು ಗಮನಿಸಿದ್ದೆ. ಅದಕ್ಕಾಗಿ ಶೋಷಣೆಗೊಳಗಾದ ಪೌರ ಕಾರ್ಮಿಕರ ಸಹಾಯಕ್ಕಾಗಿ ಕನಿಷ್ಟ ವೇತನ ಕಾಯ್ದೆ ಪ್ರಕಾರ ದೊರೆಯಬೇಕಾದ ಕನಿಷ್ಟ ಸಂಬಳವನ್ನು ಕಡ್ಡಾಯವಾಗಿ ದೊರೆಯುವ ವ್ಯವಸ್ಥೆಯನ್ನು ಮಾಡಿದೆ. ಮೊದಲು 7 ಸಾವಿರ ರೂ.. ದೊರೆಯುತ್ತಿದ್ದ ಸಂಬಳವನ್ನು 17000 ರೂ.ಗೆ ಹೆಚ್ಚಿಸಿ, ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಯಾಗುವ ವ್ಯವಸ್ಥೆಯನ್ನು ಮಾಡಲಾಯಿತು. ಈ ರೀತಿ ಪೌರಕಾರ್ಮಿಕರಿಗೆ ಮದ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಲಾಯಿತು ಎಂದರು.
ಪೌರಕಾರ್ಮಿಕರ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್ ಸರ್ಕಾರ
ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಯಾಗಿದ್ದ ಖಾಯಂ ನೇಮಕಾತಿಯನ್ನು ಬೆಂಬಲಿಸಿ, ಆಗಿನ ಸರ್ಕಾರ ಖಾಯಂ ನೇಮಕಾತಿ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪೌರ ಕಾರ್ಮಿಕರ ಈ ಬೇಡಿಕೆಯನ್ನು ಪೂರೈಸುವುದಾಗಿ ನೀಡಲಾಗಿದ್ದ ಭರವಸೆಯನ್ನು ಇಂದು ಈಡೇರಿಸಲಾಗಿದೆ. ಇದರಿಂದ 4ನೇ ದರ್ಜೆಯ ಪೌರಕಾರ್ಮಿಕನ ವೇತನ , ಅವರ ಖಾತೆಗೆ ನೇರವಾಗಿ 39,000 ರೂ.ಗಳು ಪಾವತಿಯಾಗಲಿದೆ ಎಂದು ಹೇಳಿದರು.
ಕಾಯಕದಲ್ಲಿ ಮೇಲು-ಕೀಳು ಇಲ್ಲ
ಶುಚಿತ್ವದಲ್ಲಿ ದೈವತ್ವವನ್ನು ಕಾಣಬೇಕು ಎಂದು ಮಹಾತ್ಮಾ ಗಾಂಧೀಜಿಯವರು ನುಡಿದಿದ್ದರು. ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಶ್ರೇಷ್ಠವಾದ ಕೆಲಸ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ತಿಳಿಸಿದ್ದು, ಯಾವುದೇ ಕೆಲಸದಲ್ಲಿ ಮೇಲು ಕೀಳೆಂಬುದು ಇಲ್ಲ ಎಂದರು.
ಪೌರ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. 1000 ಪೌರಕಾರ್ಮಿಕರನ್ನು ವಿದೇಶಕ್ಕೆ ಕಳಿಸುವ ಯೋಜನೆ ಸೇರಿದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ಪೌರಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು , ಅವರ ಕುಟುಂಬದವರೂ ಮುಖ್ಯವಾಹಿನಿಗೆ ಬರಬೇಕು, ತನ್ಮೂಲಕ ಸಮಸಮಾಜವನ್ನು ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ದೊರೆಯುವಂತಾಗಬೇಕು. ಪೌರಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು. ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಬೇಕು.
ಸಾರ್ವಜನಿಕರೂ ತಮ್ಮ ಪರಿಸರದ ಸ್ವಚ್ಛತೆ ಬಗ್ಗೆ ಸ್ವಯಂಪ್ರೇರಣೆಯಿಂದ ಗಮನಹರಿಸಬೇಕು ಎಂದು ತಿಳಿಸಿದರು.