ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಗುಣಗಾನ ಮಾಡಿದರು.
ಹಿರಿಯ ರಾಜಕಾರಣಿ ಕೃಷ್ಣ ಅವರು ದೂರದೃಷ್ಟಿ ಉಳ್ಳ ರಾಜಕಾರಣಿಯಾಗಿದ್ದರು. ಅವರೊಬ್ಬ ಮುತ್ಸದ್ದಿ ರಾಜಕಾರಣಿಯಾಗಿರುವ ಹಿನ್ನೆಲೆಯಲ್ಲಿ ಅವರು ದೀರ್ಘಕಾಲದವರೆಗೆ ರಾಜಕಾರಣ ಮಾಡಿದ್ದಾರೆ ಎಂದಿದ್ದಾರೆ.
ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ಭಾಗವಹಿಸಿದ್ದೆ. ಆನಂತರ ನಾನು ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ.
ಎಸ್.ಎಂ.ಕೃಷ್ಣ ಅವರು 1962ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿ ಎಂದು ಹಾಡಿ ಹೊಗಳಿದ್ದಾರೆ.
ಅವರು ರಾಜ್ಯಪಾಲರಾಗಿದ್ದಾಗ ನಾನು ಕಾಂಗ್ರೆಸ್ ಸೇರಿದ್ದೆ. ಈ ವೇಳೆ ನನ್ನ ಹಲವು ತೀರ್ಮಾನಗಳನ್ನು ಅವರು ಸ್ವಾಗತಿಸಿದ್ದರು. ಅವರು ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ.
ಡಾ.ರಾಜಕುಮಾರ್ ಅವರ ಅಪಹರಣವಾಗಿ, ದೊಡ್ಡ ಸವಾಲನ್ನು ಎದುರಿಸಿದ್ದರು ಹಾಗೂ ಅದನ್ನು ನಿಭಾಯಿಸಿದ ಕಾರ್ಯ ಮಾತ್ರ ಶ್ಲಾಘನೀಯ ಎಂದಿದ್ದಾರೆ.