ಮೈಸೂರು: ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಈ ವೇಳೆ ಉತ್ತಮ ಕರ್ತವ್ಯ ನಿರ್ವಹಿಸಿದ 126 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕ (chief minister medal) ನೀಡಲಾಗಿದೆ. ಆದರೆ, ಈ ಪದಕ ಸಿಕ್ಕವರಲ್ಲಿ ಸಸ್ಪೆಂಡ್ ಆದ ವ್ಯಕ್ತಿ ಇದ್ದು, ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾ ಸಿಎಂ ಪದಕ ಪಡೆದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಂದು ತಿಂಗಳ ಹಿಂದೆ ಅಮಾನತುಗೊಂಡಿದ್ದ ಸಲೀಂ ಪಾಷಾ, ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯದ ಜೊತೆಗೆ ದಾಖಲೆಗಳ ಸೋರಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ. ಆದರೆ, 2024ನೇ ಸಾಲಿನ ಸಿಎಂ ಪದಕ ಪಟ್ಟಿಯಲ್ಲಿ ಸಲೀಂ ಪಾಷಾ ಹೆಸರು ಇದ್ದು, ಅದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಕೇಳಿ ಬಂದಿತ್ತು. ಮೊಬೈಲ್ ಕಾಲ್ ಡಿಟೈಲ್ಸ್ ಸಂಗ್ರಹ ವೇಳೆ ಮೇಲ್ನೋಟಕ್ಕೆ ಆರೋಪ ಸಾಬೀತು ಕೂಡ ಆಗಿತ್ತು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ, ಸಿಎಂ ಪದಕ ಸಿಕ್ಕಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.