ಬೆಂಗಳೂರು : ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಶಾಕ್ ಕೊಟ್ಟಿದೆ. ಕುಣಿಗಲ್ ಶಾಸಕ ರಂಗನಾಥ್ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯಿಂದ ನೋಟಿಸ್ ನೀಡಲಾಗಿದ್ದು, ಈ ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.
ರಾಜ್ಯ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಇಬ್ಬರು ಕಾಂಗ್ರೆಸ್ ನಾಯಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಕಣಿಗಲ್ ಕೈ ಶಾಸಕ ಡಾ. ರಂಗನಾಥ್ ಮಾತನಾಡುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನಗಳನ್ನು ಪಡೆದಿರುವುದರ ಹಿಂದೆ ಶಿವಕುಮಾರ್ ಅವರು ಶಕ್ತಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು. ಡಿ. ಕೆ. ಶಿವಕುಮಾರ್ ಅವರು ಒಂದಲ್ಲ ಒಂದು ದಿನ, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ನಾವೆಲ್ಲರೂ ಅಪೇಕ್ಷೆ ಪಡುತ್ತೇವೆ ಎಂದಿದ್ದರು.
ಅದೇ ರೀತಿ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಕೂಡ ಸಿಎಂ ಬದಲಾವಣೆ ಸಂಬಂಧ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬಾರದು. ಮಾತನಾಡಿದರೆ ನೋಟಿಸ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಅದರಂತೆ ಇದೀಗ ಇಬ್ಬರು ‘ಕೈ’ ನಾಯಕರಿಗೂ ನೋಟಿಸ್ ನೀಡಲಾಗಿದೆ.



















