ಹಾಸನ: ಹೋಳಿ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.
ನಗರದಲ್ಲಿ (Hassan) ಹೋಳಿ (Holi) ಆಚರಣೆ ವೇಳೆ ಈ ಗಲಾಟೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಹಲ್ಲೆ ಮಾಡುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಿಎಂ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಹೋಳಿ ಸಂಭ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಯುವಕ ಪ್ರಜ್ವಲ್ ಎಂಬಾತನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.
ಸದ್ಯ ಗಾಯಗೊಂಡಿರುವ ಪ್ರಜ್ವಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ವಲ್‌ನನ್ನು ನೋಡಲು ಆಸ್ಪತ್ರೆಗೆ ಚನ್ನರಾಯಪಟ್ಟಣ ಮೂಲದ ಚಂದನ್ ಕುಮಾರ್ ಆಗಮಿಸಿದ್ದ. ಈ ವೇಳೆ ಅದೇ ಪುಂಡರ ಗುಂಪು ಆತನ ಮೇಲೂ ಹಲ್ಲೆ ಮಾಡಿದೆ. ಚಂದನ್ ಕೆಳಗೆ ಬಿದ್ದರೂ ಬಿಡದೆ ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಾಯಿಗೆ ಬಂದಂತೆ ನಿಂದಿಸಿ ಕಾಲಿನಿಂದ ಒದ್ದಿದ್ದಾರೆ. ಚಂದನ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚನ್ನರಾಯಪಟ್ಟಣ ಮೂಲದ ಲೋಹಿತ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.