ಡೆಹ್ರಾಡೂನ್: ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಯ್ ಶಾ ಎಂದು ಹೇಳಿಕೊಂಡು ಸ್ಥಳೀಯ ಬಿಜೆಪಿ ಶಾಸಕರೊಬ್ಬರಿಂದ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯೊಬ್ಬನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಿಯಾಂಶು ಪಂತ್‌ಗೆ ಸಾಥ್ ನೀಡಿದ್ದ ಮತ್ತಿಬ್ಬರನ್ನು ಗುರುತಿಸಲಾಗಿದ್ದು, ಆ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ 19 ವರ್ಷದ ಪ್ರಿಯಾಂಶು ಪಂತ್‌ನನ್ನು ಸೋಮವಾರ ದೆಹಲಿಯಲ್ಲಿ ಬಂಧಿಸಲಾಗಿದ್ದು, ಸಹ ಆರೋಪಿ ಉವೇಶ್ ಅಹ್ಮದ್‌ನನ್ನು ಉತ್ತರಾಖಂಡದ ಉಧಂಸಿಂಗ್ ನಗರ್ ನಲ್ಲಿ ಬಂಧಿಸಲಾಯಿತು ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಸಿಂಗ್ ದೋಬಲ್ ಹೇಳಿದ್ದಾರೆ. ಮೂರನೇ ಆರೋಪಿ ಗೌರವ್ ನಾಥ್ ಗಾಗಿ ಶೋಧ ಕಾರ್ಯ ನಡೆದಿದೆ ಎಂದೂ ತಿಳಿಸಿದ್ದಾರೆ,
ಈ ಮೂವರು ಆರೋಪಿಗಳು ಹರಿದ್ವಾರದ ರಾಣಿಪುರದ ಬಿಜೆಪಿ ಶಾಸಕ ಆದೇಶ್ ಚೌಹಾಣ್ ಅವರಿಂದ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಲ್ಲದೆ, ನೈನಿತಾಲ್ ಶಾಸಕಿ ಸರಿತಾ ಆರ್ಯ ಮತ್ತು ರುದ್ರಾಪುರ ಶಾಸಕ ಶಿವ ಅರೋರಾ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿ, ಅವರಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದರು ಎಂಬ ಮಾಹಿತಿಯೂ ತಿಳಿದುಬಂದಿದೆ ಎಂದು ದೋಬಲ್ ತಿಳಿಸಿದ್ದಾರೆ.
ಚೌಹಾಣ್ ಅವರಿಗೆ ಕಳೆದ ಭಾನುವಾರ ಸಂಜೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದವರು ತಮ್ಮನ್ನು ಅಮಿತ್ ಶಾ ಪುತ್ರ ಜಯ್ ಶಾ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಪಕ್ಷದ ನಿಧಿಗೆ 5 ಲಕ್ಷ ರೂ.ಗಳ ದೇಣಿಗೆಯನ್ನು ನೀಡುವಂತೆ ಸೂಚಿಸಿದ್ದರು. ಅನುಮಾನಗೊಂಡ ಚೌಹಾಣ್ ಅವರು ಹಲವು ಪ್ರಶ್ನೆಗಳನ್ನು ಕೇಳಿದಾಗ, ಗಲಿಬಿಲಿಗೊಂಡ ಆರೋಪಿಗಳು, ಹಣ ಪಾವತಿ ಮಾಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಕರೆ ಕಟ್ ಆದ ಕೂಡಲೇ ಶಾಸಕರ ಸಾರ್ವಜನಿಕ ಸಂಪರ್ಕಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ಪೊಲೀಸ್ ತಂಡಗಳು ಮೊಬೈಲ್ ಫೋನ್‌ನ ಸಿಡಿಆರ್, ಐಎಂಇಐ ಸಂಖ್ಯೆಗಳು ಮತ್ತು ಸ್ಥಳಗಳನ್ನು ಟ್ರ್ಯಾಕ್ ಮಾಡಿ, ಗಾಜಿಯಾಬಾದ್ ಮತ್ತು ದೆಹಲಿಯ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದ ನಂತರ, ಪಂತ್ ಅವರನ್ನು ದೆಹಲಿಯಲ್ಲಿ ಬಂಧಿಸಿವೆ. ಅಪರಾಧಕ್ಕೆ ಬಳಸಿದ ಮೊಬೈಲ್ ಕೂಡ ಪತ್ತೆಯಾಗಿದೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮೂವರು ಆರೋಪಿಗಳೂ ಶಾಸಕರಿಂದ ಹಣ ಸುಲಿಗೆ ಮಾಡಲು ಯೋಜಿಸಿದ್ದರು ಎಂದು ವಿಚಾರಣೆಯ ಸಮಯದಲ್ಲಿ ಪಂತ್ ಒಪ್ಪಿಕೊಂಡಿದ್ದಾನೆ.