ನವದೆಹಲಿ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹುದ್ದೆಗೆ ಹಿರಿಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ಹಾಲಿ ಸಿಜೆಐ ಬಿ.ಆರ್. ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಿದ್ದಾರೆ. ಇದಕ್ಕೆ ಸಮ್ಮತಿ ದೊರೆತರೆ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ಸಿಜೆಐ ಬಿ.ಆರ್. ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದು, ಸುಪ್ರೀಂ ಕೋರ್ಟ್‌ನ ಸಂಪ್ರದಾಯದಂತೆ, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಾಂಗದಲ್ಲಿ ತಮ್ಮ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ಅವರು ಶಿಫಾರಸು ಮಾಡಿದ್ದಾರೆ. ಈ ಶಿಫಾರಸಿನ ಮೇರೆಗೆ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನ.24ರಂದು ನೂತನ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಿಜೆಐ ಸ್ಥಾನಕ್ಕೇರಿದ ಹರ್ಯಾಣದ ಮೊದಲ ವ್ಯಕ್ತಿ
1962ರ ಫೆಬ್ರವರಿ 10 ರಂದು ಹರ್ಯಾಣದ ಹಿಸಾರ್ ಜಿಲ್ಲೆಯ ಒಂದು ಸಾಮಾನ್ಯ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ನ್ಯಾ.ಸೂರ್ಯಕಾಂತ್ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಲಿರುವ ಹರ್ಯಾಣ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸರಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಇವರು, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸಿದ್ದಾರೆ. ಕೇವಲ 38ನೇ ವಯಸ್ಸಿನಲ್ಲಿ ಹರ್ಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು. ನಂತರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿಯೂ, ಬಳಿಕ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದರು. ಮೇ 2019ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು.
ನೂತನ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡರೆ, ಅವರು ಸುಮಾರು 15 ತಿಂಗಳ ಕಾಲ – ಅಂದರೆ ಫೆಬ್ರವರಿ 9, 2027 ರವರೆಗೆ ದೇಶದ ನ್ಯಾಯಾಂಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಹಲವು ಐತಿಹಾಸಿಕ ತೀರ್ಪುಗಳು
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಮಹತ್ವದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ ನಿರ್ಧಾರಗಳು ಭಾರತದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರಿವೆ. ಅವರಿದ್ದ ಮಹತ್ವದ ಸಾಂವಿಧಾನಿಕ ಪೀಠಗಳಲ್ಲಿ ಇವು ಸೇರಿವೆ:
-ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ ನಿರ್ಧಾರ.
-ಪೌರತ್ವ ಕಾಯ್ದೆಯ (CAA) ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣಗಳು.
-ರಕ್ಷಣಾ ಪಡೆಗಳಿಗಾಗಿ ಜಾರಿಗೆ ತಂದಿದ್ದ ‘ಒಂದು ಶ್ರೇಣಿ, ಒಂದು ಪಿಂಚಣಿ’ (OROP) ಯೋಜನೆಯನ್ನು ಎತ್ತಿಹಿಡಿದ ತೀರ್ಪು.
- ವಿವಾದಾತ್ಮಕ ಪೆಗಾಸಸ್ ಬೇಹುಗಾರಿಕೆ ಪ್ರಕರಣದ ತನಿಖೆ.
- ದೇಶದ್ರೋಹ ಕಾನೂನು (ಸೆಕ್ಷನ್ 124A) ಜಾರಿಗೆ ತಡೆ ನೀಡಿದ ಐತಿಹಾಸಿಕ ತೀರ್ಪು.
ಇದನ್ನೂ ಓದಿ: ಬ್ರಿಟನ್‌ನಲ್ಲಿ ಭಾರತೀಯ ಮೂಲದ ಯುವತಿ ಮೇಲೆ ಜನಾಂಗೀಯ ದ್ವೇಷದ ಅತ್ಯಾಚಾರ!


















