ಬೆಂಗಳೂರು: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಪತ್ತೆಯಾಗಿದ್ದರಿಂದಾಗಿ ರಾಜ್ಯದಲ್ಲಿ ಕೂಡ ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕದ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆ ಸೂಚನೆ ಹೊರಡಿಸಿದೆ.
ದೇವಸ್ಥಾನದ ಸೇವೆಗಳಿಗೆ, ದೀಪಗಳಿಗೆ, ಪ್ರಸಾದ ತಯಾರಿಕೆ ಮತ್ತು ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚನೆ ನೀಡಲಾಗಿದೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿರುವುದನ್ನು ಟಿಟಿಡಿ ಒಪ್ಪಿಕೊಂಡಿದೆ. ಲಡ್ಡುಗೆ ಬಳಸಲಾಗಿರುವ ಕಚ್ಚಾವಸ್ತುಗಳ ಲ್ಯಾಬ್ ವರದಿ ಬಯಲಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ್ದ ಟಿಟಿಡಿ ಎಕ್ಸಿಕ್ಯೂಟಿವ್ ಅಧಿಕಾರಿ ಶ್ಯಾಮಲಾ ರಾವ್, ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ತುಪ್ಪದಲ್ಲಿ ಮೀನಿನ ಎಣ್ಣೆ, ಪಾಮ್ ಆಯಿಲ್ ಪತ್ತೆಯಾಗಿದೆ. ದನದ ಮಾಂಸದಿಂದ ತೆಗೆದ ಕೊಬ್ಬು, ಹಂದಿ ಮಾಂಸದ ಪದರದಿಂದ ತೆಗೆದ ಬಿಳಿ ಕೊಬ್ಬು ತುಪ್ಪದಲ್ಲಿ ಇರುವುದು ಕೂಡ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ನಂದಿನಿ ಶುದ್ಧ ತುಪ್ಪವನ್ನೇ ಬಳಸುವಂತೆ ಸೂಚಿಸಲಾಗಿದೆ.