ಬೆಂಗಳೂರು : ರಾಜ್ಯದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚುತ್ತಿರುವ ಬೆನ್ನಲ್ಲೇ, ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನಾ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ ವಿಭಾಗ ಭೇದಿಸಿದೆ. ರಾಜ್ಯಾದ್ಯಂತ ನೂರಾರು ಕಡೆ ನಡೆಸಿದ ಏಕಕಾಲದ ದಾಳಿಯಲ್ಲಿ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನು ಪತ್ತೆಹಚ್ಚಲಾಗಿದ್ದು, ಈ ಜಾಲದ ಪ್ರಮುಖ 13 ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಲಾಗಿದೆ.
ಫೆಬ್ರವರಿ 6ರಂದು ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಐಡಿ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಸೈಬರ್ ವಂಚನೆಯ ಭಾರೀ ಜಾಲ ಬಯಲಾಗಿದೆ. ಅಮಾಯಕ ಜನರ ಬ್ಯಾಂಕ್ ಖಾತೆಗಳು, ಎಟಿಎಂ ಕಾರ್ಡ್‌ಗಳು ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ, ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ಖಾತೆ ವಿವರಗಳನ್ನು ನೀಡಿದ ಅನೇಕ ಅಮಾಯಕ ವ್ಯಕ್ತಿಗಳಿಗೆ ತಮ್ಮ ಖಾತೆಗಳು ವಂಚನೆಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.
ತನಿಖೆಯ ವೇಳೆ ಸುಮಾರು 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಸಕ್ರಿಯ ಬಳಕೆಯಲ್ಲಿದ್ದವು ಎಂಬುದು ಪತ್ತೆಯಾಗಿದ್ದು, ಇವುಗಳ ಮೂಲಕ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ | ರಹಸ್ಯ ಕ್ಯಾಮರಾ ಅಳವಡಿಸಿ 50 ಲಕ್ಷ ಬೇಡಿಕೆ ; ನಕಲಿ ಪತ್ರಕರ್ತರ ಗ್ಯಾಂಗ್ ಅರೆಸ್ಟ್!



















