ಬೆಂಗಳೂರು | ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬೈರತಿ ಬಸವರಾಜ್‌ಗೆ ಸಿಐಡಿ ಅಧಿಕಾರಿಗಳ ಡ್ರಿಲ್ ಶುರುವಾಗಿದೆ.
ಈಗಾಗಲೇ ಸಿಐಡಿ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಸಾಕ್ಷಿದಾರರು ಹಾಗೂ ಇನ್ನಿತರ ಆರೋಪಿಗಳ ಹೇಳಿಕೆ ಆಧರಿಸಿ ಬೈರತಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಆದರೆ, ಸಿಐಡಿ ಅಧಿಕಾರಿಗಳ ಯಾವುದೇ ಪ್ರಶ್ನೆಗೂ ಬೈರತಿ ಬಸವರಾಜ್ ತುಟಿ ಪಿಟಕ್ ಎನ್ನುತ್ತಿಲ್ಲ ಎನ್ನಲಾಗಿದೆ. ಹಲವು ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ. ನನ್ನ ಕಚೇರಿಗೆ, ನಾನು ಹೋದಲ್ಲೆಲ್ಲ ಕೆಲವರು ಫೋಟೋ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರು ಯಾರು ಅಂತ ನನಗೆ ಗೊತ್ತಿಲ್ಲ. ಜಮೀನಿನ ವಿಚಾರದಲ್ಲಿ ನನಗೆ ಬಿಕ್ಲು ಶಿವುಗೆ ಯಾವುದೇ ವ್ಯಾಜ್ಯವಿರಲಿಲ್ಲ. ಆತ ಯಾರು ಅಂತಲೇ ಗೊತ್ತಿಲ್ಲ ಎಂದು ಬೈರತಿ ಹೇಳಿದ್ದಾರೆ ಎಂಬುವುದು ಬಲ್ಲ ಮೂಲಗಳಿಂದ ಸಿಕ್ಕ ಮಾಹಿತಿಯಾಗಿದೆ. ಈ ವೇಳೆ ಸಿಐಡಿ ಅಧಿಕಾರಿಗಳು ಕಾಲ್ ಲಿಸ್ಟ್ ಹಿಡಿದು ಪ್ರಶ್ನಿಸಿದಾಗ ಬೈರತಿ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ 9 ಕಾರಣಗಳನ್ನು ಕೋರ್ಟ್‌ಗೆ ನೀಡಿ ಬೈರತಿ ಬಸವರಾಜ್‌ರನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಿಐಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಬೈರತಿ ಬಸವರಾಜ್ ಫುಲ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ. ಕೊಲೆ ಆರೋಪಿಗಳೇ ಈ ಹಿಂದೆ ಬೈರತಿ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆ ತಪ್ಪೊಪ್ಪಿಗೆ ಹೇಳಿಕೆಗಳು ಬೈರತಿಗೆ ಕಂಟಕವಾಗಬಹುದಾ? ಎಂಬ ಪ್ರಶ್ನೆಗಳು ಎದ್ದಿವೆ. ಆ ತಪ್ಪೊಪ್ಪಿಗೆ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಬೈರತಿ ಬಸವರಾಜ್ ವಿಚಾರಣೆ ನಡೆಯುತ್ತಿದೆ. ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಯಾವುದೇ ರಿಯಾಕ್ಷನ್ ನೀಡದೆ ನಂಗೇನು ಗೊತ್ತಿಲ್ಲ, ಗೊತ್ತಿಲ್ಲ ಅನ್ನೋ ಸಿದ್ದ ಉತ್ತರವನ್ನು ಬೈರತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಈ ಹಿಂದೆ ಇದೇ ಕೇಸ್‌ನಲ್ಲಿ ಬಂಧಿತರಾಗಿರುವ ಆರೋಪಿಗಳು ಬೈರತಿ ವಿರುದ್ಧ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಆ ಹೇಳಿಕೆಗಳೇ ಬೈರತಿ ಬಸವರಾಜ್‌ಗೆ ಸಂಕಷ್ಟ ತರಲಿವೆ ಎನ್ನಲಾಗುತ್ತಿದೆ. ಬೈರತಿ ಹೇಳಿಕೆಗಳು, ಇತರೆ ಆರೋಪಿಗಳ ಹೇಳಿಕೆಗಳಿಗೆ ತದ್ವಿರುದ್ದವಾಗಿವೆ. ಅದಕ್ಕೆ ಪೂರಕವಾಗಿ ತಾಂತ್ರಿಕ ಸಾಕ್ಯಗಳನ್ನು ಸಿಐಡಿ ಅಧಿಕಾರಿಗಳು ಮುಂದಿಟ್ಟು ಪ್ರಶ್ನೆ ಮಾಡಿದ್ರೂ ಉತ್ತರ ನೀಡುತ್ತಿಲ್ಲ. ವಿಚಾರಣೆಯ ವಿಡಿಯೋ ಮತ್ತು ದಾಖಲೆಗಳ ಸಮೇತ ಕೋರ್ಟ್ ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೋರ್ಟ್ ಗಮನಕ್ಕೆ ತಂದು ಮತ್ತೆ ಕಸ್ಟಡಿಗೆ ಪಡೆಯಲು ಸಿಐಡಿ ಸಿದ್ಧತೆಯನ್ನೂ ನಡೆಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | ವಿದೇಶಿಗರು ಸೇರಿ 24 ಜನ ಗಂಭೀರ



















