ಮುಂಬೈ: ‘ಯೂನಿವರ್ಸ್ ಬಾಸ್’ ಎಂದೇ ಖ್ಯಾತರಾಗಿರುವ, ಟಿ20 ಕ್ರಿಕೆಟ್‌ನ ದೈತ್ಯ ಕ್ರಿಸ್ ಗೇಲ್, ಐಪಿಎಲ್‌ನಲ್ಲಿ ತಮ್ಮ ಕೊನೆಯ ದಿನಗಳಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಿಂದ ಅನುಭವಿಸಿದ ಅವಮಾನ ಮತ್ತು ನೋವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಹಿರಿಯ ಆಟಗಾರನಾಗಿ ತಮಗೆ ಸಿಗಬೇಕಾದ ಗೌರವ ಸಿಗಲಿಲ್ಲ ಮತ್ತು ಫ್ರಾಂಚೈಸಿಯು ತಮ್ಮನ್ನು ಮಕ್ಕಳಂತೆ ನಡೆಸಿಕೊಂಡಿದ್ದು, ಜೀವನದಲ್ಲಿ ಮೊದಲ ಬಾರಿಗೆ ಖಿನ್ನತೆಗೆ ಜಾರುವಂತೆ ಮಾಡಿತ್ತು ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗೇಲ್, “ಪಂಜಾಬ್ ಕಿಂಗ್ಸ್‌ನಲ್ಲಿ ನನ್ನ ಐಪಿಎಲ್ ವೃತ್ತಿಜೀವನವು ಅಕಾಲಿಕವಾಗಿ ಕೊನೆಗೊಂಡಿತು. ನಾನು ಈ ಲೀಗ್‌ಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಆದರೆ, ಹಿರಿಯ ಆಟಗಾರನಾಗಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರು ನನ್ನನ್ನು ಮಕ್ಕಳಂತೆ ನಡೆಸಿಕೊಂಡರು. ಇದರಿಂದ ಜೀವನದಲ್ಲಿ ಮೊದಲ ಬಾರಿಗೆ ಖಿನ್ನತೆಯ ಭಾವನೆ ಉಂಟಾಗಿತ್ತು,” ಎಂದು ಬೇಸರ ವ್ಯಕ್ತಪಡಿಸಿದರು.
ಈ ನೋವನ್ನು ಸಹಿಸಲಾಗದೆ, ಅಂದಿನ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರೊಂದಿಗೆ ಮಾತನಾಡಿದಾಗ ತಾನು ಕಣ್ಣೀರು ಹಾಕಿದ್ದೆ ಎಂದು ಗೇಲ್ ನೆನಪಿಸಿಕೊಂಡರು. “ನಾನು ಅನಿಲ್ ಅವರೊಂದಿಗೆ ಮಾತನಾಡಿದಾಗ ಅಕ್ಷರಶಃ ಅತ್ತುಬಿಟ್ಟೆ. ಫ್ರಾಂಚೈಸಿಯು ನನ್ನನ್ನು ನಡೆಸಿಕೊಂಡ ರೀತಿ ಮತ್ತು ಅವರ ಕಾರ್ಯವೈಖರಿಯಿಂದ ನನಗೆ ತುಂಬಾ ನೋವಾಗಿತ್ತು ಮತ್ತು ನಿರಾಶೆಯಾಗಿತ್ತು,” ಎಂದು ಅವರು ಹೇಳಿದರು.
2021ರ ಐಪಿಎಲ್ ಆವೃತ್ತಿಯ ಮಧ್ಯದಲ್ಲಿ ತಂಡವನ್ನು ತೊರೆಯುವ ನಿರ್ಧಾರ ತೆಗೆದುಕೊಂಡಿದ್ದನ್ನು ಸ್ಮರಿಸಿದ ಗೇಲ್, “ಆಗಿನ ನಾಯಕ ಕೆ.ಎಲ್. ರಾಹುಲ್ ನನಗೆ ಫೋನ್ ಮಾಡಿ, ‘ಕ್ರಿಸ್, ಇರು, ನೀನು ಮುಂದಿನ ಪಂದ್ಯದಲ್ಲಿ ಆಡುತ್ತೀಯಾ’ ಎಂದು ಹೇಳಿದರು. ಆದರೆ, ನಾನು ಅವರಿಗೆ ‘ನಿಮಗೆ ಒಳ್ಳೆಯದಾಗಲಿ’ ಎಂದು ಹೇಳಿ, ನನ್ನ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಂಡು ಹೊರಟುಬಂದೆ,” ಎಂದು ಆ ನೋವಿನ ಕ್ಷಣವನ್ನು ಮೆಲುಕು ಹಾಕಿದರು.
“ಆ ಹಂತದಲ್ಲಿ ಹಣ ನನಗೆ ಮುಖ್ಯವಾಗಿರಲಿಲ್ಲ. ನಿಮ್ಮ ಮಾನಸಿಕ ಆರೋಗ್ಯವೇ ಎಲ್ಲಕ್ಕಿಂತ ಮಿಗಿಲು. ನಾನು ಒಳಗಿನಿಂದಲೇ ನಾಶವಾಗುತ್ತಿದ್ದೇನೆ ಎಂದು ನನಗೆ ಅನ್ನಿಸಿತು, ಹಾಗಾಗಿ ನಾನು ಹೊರನಡೆಯಬೇಕಾಯಿತು,” ಎಂದು 2018 ರಿಂದ 2021 ರವರೆಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಗೇಲ್ ತಿಳಿಸಿದ್ದಾರೆ.



















