ಲೌಸನ್ನೆ: ಭಾರತದ ಜಾವೆಲಿನ್ ಎಸೆತಗಾರ, ಪ್ಯಾರಿಸ್ ಒಲಂಪಿಕ್ಸ್ ನ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ನಲ್ಲಿ(Lausanne Diamond League) 89.49 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಈ ಋತುವಿನ ಅತ್ಯುತ್ತಮ ಎಸೆತದೊಂದಿಗೆ 2 ನೇ ಸ್ಥಾನ ಪಡೆದು ನೀರಜ್ ಚೋಪ್ರಾ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಪಂದ್ಯವು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್ ನಲ್ಲಿ ನಡೆಯಲಿದೆ. ಫೈನಲ್ ನಲ್ಲಿ ಚಿನ್ನಕ್ಕಾಗಿ ಮತ್ತೊಮ್ಮೆ ನೀರಜ್ ಹೋರಾಟ ನಡೆಸಲಿದ್ದಾರೆ. ನೀರಜ್ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಈಗ ತಮ್ಮ ಎಸೆತವನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.
ಅಲ್ಲದೇ, ಇದೇ ಟೂರ್ನಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ದೂರ ಎಸೆದು ಪ್ರಥಮ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ನೀರಜ್ ಕೊನೆಯ ಪ್ರಯತ್ನದಲ್ಲಿ 89.49 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಗೂ ಮುನ್ನ ನೀರಜ್ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದರು. ಕೊನೆಗೆ ದ್ವಿತೀಯ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್ ನಲ್ಲಿ 6 ಜನ ಆಟಗಾರರು ಪದಕಕ್ಕಾಗಿ ಕಾದಾಟ ನಡೆಸಲಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.
ನೀರಜ್ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಮೊದಲ ಐದು ಪ್ರಯತ್ನಗಳಲ್ಲಿ ನೀರಜ್ ಕ್ರಮವಾಗಿ 82.10, 83.21, 83.13, 82.34 ಮತ್ತು 85.58 ಮೀ. ದೂರ ಎಸೆದಿದ್ದರು. ಆದರೆ, ಕೊನೆಯ ಪ್ರಯತ್ನದಲ್ಲಿ 89.49 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಏರಿದರು. ನೀರಜ್ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದಾಗಿದೆ. ಈ ಎಸೆತವನ್ನು 2022ರ ಸ್ಟಾಕ್ ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದಾರೆ. ಈ ಆವೃತ್ತಿಯಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು.