ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತಕ್ಕೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಈ ಭೀಕರ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸದ್ಯ ಈ ದುರಂತದಲ್ಲಿ ಅದೃಷ್ಟವಶಾತ್ ಮೂವರು ಯುವತಿಯರು ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವೆಲ್ಸ್‌ನ ಸ್ಲೀಪರ್ ಬಸ್ಗೆ ಎದುರಿನಿಂದ ಬಂದ ಕಂಟೈನರ್ ಲಾರಿ ಡಿವೈಡರ್ ದಾಟಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಸುಮಾರು 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಆದ್ರೆ, ಮೂವರು ಸ್ನೇಹಿತರಾದ ಗಗನ, ರಕ್ಷಿತಾ ಮತ್ತು ರಶ್ಮಿ ಕ್ರಿಸ್ಮಸ್ ರಜೆಗೆಂದು ಊರಿಗೆ ಹೊರಟಿದ್ದರು. ಇದರಲ್ಲಿ ಭಟ್ಕಳ ಮೂಲದ ರಶ್ಮಿ ತನ್ನ ಸ್ನೇಹಿತೆಯರ ಜೊತೆಗೆ ಗೋಕರ್ಣಕ್ಕೆ ಹೋಗುತ್ತಿದ್ದು, ಮೂವರು ಯುವತಿಯರು ಕೂಡ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಶ್ಮಿ, ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸೋಮವಾರದವರೆಗೆ ರಜೆ ಹಾಕಿಕೊಂಡು ನಾಲ್ಕು ದಿನಗಳ ರಜೆ ಪಡೆದಿದ್ದರು. ಆದರೆ ಟೀಂ ಮ್ಯಾನೇಜರ್ ನಾಲ್ಕು ದಿನಗಳ ರಜೆ ನೀಡಲು ಆಗುವುದಿಲ್ಲ ಎಂದಿದ್ದರೂ, ರಶ್ಮಿ ರಜೆ ಬೇಕೇ ಬೇಕು ಎಂದು ಪಟ್ಟುಹಿಡಿದುರಜೆ ಪಡೆದಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ತನ್ನ ಇಬ್ಬರು ಸ್ನೇಹಿತೆಯರಾದ ಗಗನ ಮತ್ತು ರಕ್ಷಿತಾ ಜೊತೆಗೆ ಬಸ್ ಹತ್ತಿ ಗೋಕರ್ಣಕ್ಕೆ ತೆರಳುತ್ತಿದ್ದರು. ಗೋಕರ್ಣದ ನಂತರ ತನ್ನ ಊರಾದ ಭಟ್ಕಳಕ್ಕೆ ಹೋಗಬೇಕಿತ್ತು.
ಈ ಮೂವರು ಯುವತಿಯರು ಸಂತೋಷದಿಂದ ಪ್ರಯಾಣಿಸುತ್ತಿದ್ದರು. ಆದರೆ ಬೆಳಗ್ಗೆ ಸುಮಾರು 3 ಗಂಟೆಗೆ ಹಿರಿಯೂರು ಬಳಿ ಗೊರ್ಲತ್ತು ಕ್ರಾಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯ ರಭಸಕ್ಕೆ ಬಸ್ ಹೊತ್ತಿ ಉರಿದು ಕೆಲವೇ ನಿಮಿಷಗಳಲ್ಲಿ ಕರಕಲಾಗಿದೆ. ರಾತ್ರಿ ಪ್ರಯಾಣದಲ್ಲಿ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದ ಕಾರಣ ಬೆಂಕಿ ಹರಡಿದಾಗ ಹೊರಬರಲು ಆಗಲಿಲ್ಲ. ಆದರೂ ಈ ಮೂವರು ಯುವತಿಯರು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ದೆಹಲಿಯ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ!



















