ನವದೆಹಲಿ : ಬೆಂಗಳೂರಿನಿಂದ ಗೋಕರ್ಣಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸೀ ಬರ್ಡ್ ಸ್ಲೀಪರ್ ಕೋಚ್ ಖಾಸಗಿ ಬಸ್ ಚಿತ್ರದುರ್ಗದ ಬಳಿಯ ಗೊರ್ಲತ್ತು ಬಳಿ ಭೀಕರ ಅಪಘಾತ ಸಂಭವಿಸಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ, ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ರಾಜ್ಯದ ಗಣ್ಯರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಂದ ಘಟನಾ ವರದಿ ಕೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ :
ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ತನಿಖಾ ವರದಿ ಕೇಳಿದ ರಾಮಲಿಂಗಾರೆಡ್ಡಿ:
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಚಿತ್ರದುರ್ಗದ ಹಿರಿಯೂರು ಬಳಿ ಇಂದು ನಸುಕಿನ ಜಾವ ಖಾಸಗಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ 10ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದನ್ನು ಕೇಳಿ ಅತ್ಯಂತ ದುಃಖವಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ರಸ್ತೆ ವಿಭಜಕವನ್ನು ಹಾರಿ ಬಸ್‌ಗೆ ಡಿಕ್ಕಿ ಹೊಡೆದಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಸಾರಿಗೆ ಆಯುಕ್ತರಾದ ಶ್ರೀ ಯೋಗೇಶ್ವರ್ ಹಾಗೂ ಸಹಾಯಕ ಆಯುಕ್ತರಾದ ಶ್ರೀಮತಿ ಓಂಕಾರೇಶ್ವರಿ ಅವರು ಹೋಗುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದು ತಿಳಿಸಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ ಸಂತಾಪ:
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದ ದುರ್ಘಟನೆಯಲ್ಲಿ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಸಜೀವ ದಹನವಾಗಿರುವ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ದುರ್ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬವರ್ಗದವರಿಗೆ ಭಗವಂತನು, ಈ ನೋವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಿಂದ ಗೋಕರ್ಣ ಟ್ರಿಪ್ಗೆ ಹೊರಟವರು ಅಪಘಾತದಲ್ಲಿ ದುರಂತ ಅಂತ್ಯ


















