ಇತ್ತೀಚೆಗೆ ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಸಂಭವಿಸುತ್ತಿವೆ. ಹೀಗಾಗಿ ಹಲವಾರು ಜನರ ಬದುಕು ಬೀದಿಗೆ ಬಂದು ನಿಲ್ಲುತ್ತಿವೆ. ಈ ಹಿನ್ನೆಲೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದು, ಮೆಗಾಸ್ಟಾರ್ ಕುಟುಂಬ ಈ ಪೈಕಿ ಅಗ್ರಸ್ಥಾನದಲ್ಲಿರುವುದು ವಿಶೇಷ.
ತೆಲುಗು ಚಿತ್ರರಂಗಕ್ಕೆ ಇಡೀ ದೇಶದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ನಂದಮೂರಿ ಕುಟುಂಬ, ಮೆಗಾಸ್ಟಾರ್ ಕುಟುಂಬ, ಅಕ್ಕಿನೇನಿ ಕುಟುಂಬ, ದಗ್ಗುಬಾಟಿ ಕುಟುಂಬಗಳ ದರ್ಬಾರ್ ಇದೆ. ಹಿಂದೆ ನಂದಮೂರಿ ಕುಟುಂಬದಲ್ಲಿ ಹೆಚ್ಚು ಸಂಖ್ಯೆಯ ನಾಯಕ ನಟರಿದ್ದರು. ಈಗ ಮೆಗಾ ಕುಟುಂಬದಲ್ಲಿ ಹೆಚ್ಚು ಸಂಖ್ಯೆಯ ನಾಯಕ ನಟರಿದ್ದಾರೆ. ಮೆಗಾ ಕುಟುಂಬದ ಬಹುತೇಕ ಎಲ್ಲ ನಾಯಕ ನಟರು ಯಶಸ್ವಿಯಾಗಿದ್ದು, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.
ಸದ್ಯ ಮೆಗಾ ಕುಟುಂಬದ ಸದಸ್ಯರು ಕೆಲವೇ ದಿನಗಳಲ್ಲಿ 9.40 ಕೋಟಿ ರೂ. ಹಣ ದಾನ ಮಾಡಿ ತೆಲುಗು ಜನರ ಮನಸ್ಸು ಗೆದ್ದಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ಆಂಧ್ರ ಹಾಗೂ ತೆಲಂಗಾಣದ ಕೆಲ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸಾವಿರಾರು ಮಂದಿ ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಇದಕ್ಕಾಗಿ ಕೈ ಜೋಡಿಸಿವೆ. ಮೆಗಾಸ್ಟಾರ್ ಕುಟುಂಬದಿಂದಲೇ ಕೇವಲ ಒಂದು ವಾರದ ಸಮಯದಲ್ಲಿ 9.40 ಕೋಟಿ ಹಣ ಸರ್ಕಾರಕ್ಕೆ ತಲುಪಿದೆ.
ಆರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ತೆಲಂಗಾಣ ಹಾಗೂ ಆಂಧ್ರ ಪ್ರದೇಶಕ್ಕೆ ತಲಾ ಐವತ್ತು ಲಕ್ಷ ರೂ. ಗಳಂತೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದರು. ತಂದೆಯನ್ನು ಅನುಸರಿಸಿ ರಾಮ್ ಚರಣ್ ಸಹ ಒಂದು ಕೋಟಿ ರೂಪಾಯಿ ನೀಡಿದರು. ನಂತರ ಪವನ್ ಕಲ್ಯಾಣ್ ಐದು ಕೋಟಿ ನೀಡಿದರು. ಮೆಗಾ ಫ್ಯಾಮಿಲಿ ಇಂದು 9.40 ಕೋಟಿ ರೂಪಾಯಿ ಹಣವನ್ನು ಆಂಧ್ರ ಹಾಗೂ ತೆಲಂಗಾಣ ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.