ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೂರ್ನಿಯ ಆತಿಥ್ಯ ವಹಿಸುವ ಭಾಗ್ಯ ಕೈತಪ್ಪಿದೆ. 2026ರ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಬೆಂಗಳೂರಿನ ಹೆಸರಿಲ್ಲದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಐಪಿಎಲ್ 2025ರ ಫೈನಲ್ ನಂತರ ನಡೆದ ದುರಂತದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಐಪಿಎಲ್ ಸಂಭ್ರಮಾಚರಣೆಯ ದುರಂತದ ಛಾಯೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 2025ರ ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ ಐತಿಹಾಸಿಕ ಕ್ಷಣದ ನಂತರ ನಡೆದ ಘಟನೆಯೇ ಇಂದಿನ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಂದು ಗೆಲುವಿನ ಸಂಭ್ರಮಾಚರಣೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಜಮಾಯಿದ್ದ ಸಾವಿರಾರು ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 11 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯು ಕ್ರೀಡಾಂಗಣದ ಜನದಟ್ಟಣೆ ನಿರ್ವಹಣೆ ಮತ್ತು ಸುರಕ್ಷತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತು ಐಸಿಸಿ ಇನ್ನೂ ಬೆಂಗಳೂರಿಗೆ ದೊಡ್ಡ ಮಟ್ಟದ ಪಂದ್ಯಗಳನ್ನು ನೀಡಲು ಹಿಂದೇಟು ಹಾಕುತ್ತಿವೆ.
ಮಹಿಳಾ ವಿಶ್ವಕಪ್ ಬೆನ್ನಲ್ಲೇ ಮತ್ತೊಂದು ಆಘಾತ
ಬೆಂಗಳೂರಿಗೆ ಟೂರ್ನಿ ಕೈತಪ್ಪುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2025ರ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳನ್ನು ಕೂಡ ಭದ್ರತಾ ಕಾರಣಗಳಿಂದಾಗಿ ಬೆಂಗಳೂರಿನಿಂದ ನವಿ ಮುಂಬೈಗೆ ಸ್ಥಳಾಂತರಿಸಲಾಗಿತ್ತು. ಇದೀಗ 2026ರ ಪುರುಷರ ಟಿ20 ವಿಶ್ವಕಪ್‌ನ ಸರದಿ ಬಂದಾಗಲೂ ಸಿಲಿಕಾನ್ ಸಿಟಿಯನ್ನು ಕಡೆಗಣಿಸಲಾಗಿದೆ. ದೇಶದ ಅತ್ಯಂತ ಹಳೆಯ ಮತ್ತು ರೋಚಕ ಕ್ರಿಕೆಟ್ ವಾತಾವರಣ ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣವು ಸತತವಾಗಿ ಪ್ರಮುಖ ಟೂರ್ನಿಗಳಿಂದ ಹೊರಗುಳಿಯುತ್ತಿರುವುದು ಸ್ಥಳೀಯ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
ಆತಿಥ್ಯ ವಹಿಸಲಿರುವ ಪ್ರಮುಖ ನಗರಗಳು
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿರುವ 2026ರ ಟಿ20 ವಿಶ್ವಕಪ್‌ಗೆ ಅಂತಿಮಗೊಂಡಿರುವ ಕ್ರೀಡಾಂಗಣಗಳ ಪಟ್ಟಿಯಲ್ಲಿ ಭಾರತದ ಐದು ಪ್ರಮುಖ ನಗರಗಳು ಸ್ಥಾನ ಪಡೆದಿವೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ, ಕೋಲ್ಕತ್ತಾದ ಈಡನ್ ಗಾರ್ಡನ್ಸ್, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಇತ್ತ ಶ್ರೀಲಂಕಾದಲ್ಲಿ ಕ್ಯಾಂಡಿಯ ಪಲ್ಲೆಕೆಲೆ ಮತ್ತು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ ಹಾಗೂ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನಗಳು ಟೂರ್ನಿಗೆ ವೇದಿಕೆಯಾಗಲಿವೆ.
ಭವಿಷ್ಯದಲ್ಲಿ ಆತಿಥ್ಯ ಸಿಗಲಿದೆಯೇ?
ಸದ್ಯಕ್ಕೆ ಬೆಂಗಳೂರು ವಿಶ್ವಕಪ್ ಪಟ್ಟಿಯಿಂದ ಹೊರಬಿದ್ದಿದ್ದರೂ, ಅಧಿಕಾರಿಗಳ ಪ್ರಕಾರ ಕ್ರೀಡಾಂಗಣದ ಭದ್ರತಾ ವ್ಯವಸ್ಥೆ ಮತ್ತು ಮೂಲಸೌಕರ್ಯಗಳ ಪರಿಶೀಲನೆ ಮುಂದುವರಿಯಲಿದೆ. ಹೊಸ ಸುರಕ್ಷತಾ ಕ್ರಮಗಳು ಮತ್ತು ನವೀಕರಣ ಕಾಮಗಾರಿಗಳು ಪೂರ್ಣಗೊಂಡು, ಅಂತಾರಾಷ್ಟ್ರೀಯ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಭವಿಷ್ಯದ ಐಸಿಸಿ ಟೂರ್ನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಬೆಂಗಳೂರು | ಟ್ರಾಕ್ಟರ್‌ಗೆ ಲಾರಿ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು


















