ಬೀಜಿಂಗ್: ನಿಮಗೆ 1.2 ಕೋಟಿ ರೂ. ಪಡೆಯುವ ಆಸೆಯಿದೆಯೇ? ಹಾಗಿದ್ದರೆ ನೀವು ಮಾಡಬೇಕಾದ ಕೆಲಸ ಇಷ್ಟೇ- ಒಂದು ಬೆಕ್ಕನ್ನು ಪ್ರೀತಿಯಿಂದ ಕೊನೆಯವರೆಗೂ ನೋಡಿಕೊಳ್ಳುವುದು!
ಹೌದು, ಚೀನಾದ ವ್ಯಕ್ತಿಯೊಬ್ಬರು ತಮ್ಮ ಪ್ರೀತಿಯ ಬೆಕ್ಕನ್ನು ಆರೈಕೆ ಮಾಡುವವರಿಗೆ ಆಫರ್ ಮಾಡಿರುವ ಕೊಡುಗೆಯು ಇಡೀ ವಿಶ್ವದ ಗಮನ ಸೆಳೆದಿದೆ! ತನ್ನ ಜೀವನದ ಎಲ್ಲ ಉಳಿತಾಯವನ್ನು, ಅಂದರೆ ಸುಮಾರು 10 ಲಕ್ಷ ಯುವಾನ್‌ಗಿಂತಲೂ (ಸುಮಾರು 1.2 ಕೋಟಿ ರೂಪಾಯಿ) ಹೆಚ್ಚಿನ ಮೊತ್ತವನ್ನು, ತನ್ನ ಬೆಕ್ಕನ್ನು ಆರೈಕೆ ಮಾಡುವ ಯಾವುದೇ ಅಪರಿಚಿತ ವ್ಯಕ್ತಿಗೆ ನೀಡಲು ಸಿದ್ಧನಿದ್ದೇನೆ ಎಂದು ಘೋಷಿಸಿದ್ದಾರೆ.
ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ವಾಸಿಸುವ 82 ವರ್ಷದ ಲಾಂಗ್ ಎಂಬ ವೃದ್ಧ, ತನ್ನ ಏಕೈಕ ಒಡನಾಡಿಯಾದ “ಕ್ಸಿಯಾನ್‌ಬಾ” ಎಂಬ ಬೆಕ್ಕನ್ನು ಜೀವನಪರ್ಯಂತ ಆರೈಕೆ ಮಾಡುವವರಿಗೆ ತನ್ನ ಎಲ್ಲ ಆಸ್ತಿಯನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಮಕ್ಕಳಿಲ್ಲದ, ಒಂಟಿಯಾಗಿರುವ ಈ ವೃದ್ಧ, 10 ವರ್ಷದ ಹಿಂದೆ ತನ್ನ ಪತ್ನಿಯನ್ನು ಕಳೆದುಕೊಂಡರು. ಒಂದು ದಿನ ಮಳೆಗಾಲದಲ್ಲಿ ತೊಂದರೆಯಲ್ಲಿ ಸಿಲುಕಿದ್ದ ಒಂದು ಬೆಕ್ಕನ್ನು ರಕ್ಷಿಸಿ, ಮನೆಗೆ ತಂದಿದ್ದರು.
ಅದಕ್ಕೆ ಕ್ಸಿಯಾನ್‌ಬಾ ಎಂದು ಹೆಸರಿಟ್ಟರು. ಆ ಬೆಕ್ಕಿನೊಂದಿಗೆ ಗಾಢವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಅವರಿಗೆ ಈಗ, ತನ್ನ ಮರಣಾನಂತರ ತನ್ನ ಪ್ರೀತಿಯ ಬೆಕ್ಕಿನ ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಿದೆ. ಹೀಗಾಗಿ ಲಾಂಗ್ ಅವರು ಕ್ಸಿಯಾನ್‌ಬಾಳನ್ನು ಪ್ರೀತಿಯಿಂದ ಆರೈಕೆ ಮಾಡುವ ಒಬ್ಬ ವಿಶ್ವಾಸಾರ್ಹ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ.

ಗುವಾಂಗ್‌ಡಾಂಗ್ ರೇಡಿಯೋ ಮತ್ತು ಟೆಲಿವಿಷನ್‌ಗೆ ಮಾತನಾಡಿದ ಲಾಂಗ್, ತನ್ನ ಏಕೈಕ ಷರತ್ತು ಏನೆಂದರೆ, ಹೊಸ ಮಾಲಿಕನು ನನ್ನ ಬೆಕ್ಕು ಕ್ಸಿಯಾನ್‌ಬಾಳನ್ನು “ಅತ್ಯಂತ ಜಾಗರೂಕತೆಯಿಂದ ಆರೈಕೆ ಮಾಡಬೇಕು” ಎಂದಿದ್ದಾರೆ. ಇದಕ್ಕಾಗಿ ಮನೆ ಮತ್ತು ಉಳಿತಾಯ ಸೇರಿದಂತೆ ತನ್ನ ಒಟ್ಟು ಆಸ್ತಿಯನ್ನು ಆರೈಕೆದಾರರಿಗೆ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಈ ವ್ಯಕ್ತಿಯ ಪ್ರಾಣಿಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ.
ಚೀನಾದಲ್ಲಿ ಸಾಕುಪ್ರಾಣಿಗಳ ಮಾರುಕಟ್ಟೆ ಭಾರೀ ಬೆಳವಣಿಗೆ ಕಾಣುತ್ತಿದೆ. 2024ರಲ್ಲಿ ಈ ಕ್ಷೇತ್ರವು ಸುಮಾರು 42 ಶತಕೋಟಿ ಡಾಲರ್ (ಸುಮಾರು 3.5 ಲಕ್ಷ ಕೋಟಿ ರೂ.) ಮೌಲ್ಯದ್ದಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ. 7.5ರಷ್ಟು ಹೆಚ್ಚಳ ಕಂಡಿದೆ. ನಗರಗಳಲ್ಲಿ ಸಾಕುಪ್ರಾಣಿಗಳ ಸಂಖ್ಯೆ ಮಕ್ಕಳ ಸಂಖ್ಯೆಯನ್ನು ಮೀರಿಸುವ ಸಾಧ್ಯತೆಯಿದೆ. 1990 ಮತ್ತು 2000ರ ದಶಕದಲ್ಲಿ ಜನಿಸಿದ ಯುವ ಜನರು, ಸಾಕುಪ್ರಾಣಿಗಳನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಿ, ಉತ್ತಮ ಆಹಾರ, ಆರೋಗ್ಯ ಸೇವೆ, ಸೌಂದರ್ಯ ಉತ್ಪನ್ನಗಳು ಮತ್ತು ಅಂತ್ಯಕ್ರಿಯೆಗಳಿಗೂ ಭಾರೀ ಖರ್ಚು ಮಾಡುತ್ತಿದ್ದಾರೆ.
ಈ ಹಿಂದೆ ಇದೇ ರೀತಿಯ ಘಟನೆಯೊಂದರಲ್ಲಿ, ಶಾಂಘೈನ ವೃದ್ಧ ಮಹಿಳೆಯೊಬ್ಬರು ತನ್ನ 2.8 ಮಿಲಿಯನ್ ಡಾಲರ್ ಆಸ್ತಿಯನ್ನು ತನ್ನ ಸಾಕುಪ್ರಾಣಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ತನ್ನ ಮಕ್ಕಳು ವೃದ್ಧಾಪ್ಯದಲ್ಲಿ ತನ್ನನ್ನು ಭೇಟಿಯಾಗದೆ, ಕಾಳಜಿಯಿಂದ ವಂಚಿತರಾಗಿದ್ದರಿಂದ, ತನ್ನ ಬೆಕ್ಕುಗಳು ಮತ್ತು ಶ್ವಾನಗಳೇ ತನಗೆ ನಿರಂತರ ಒಡನಾಟ ಮತ್ತು ಭಾವನಾತ್ಮಕ ಸಾಂತ್ವನ ನೀಡಿದವು ಎಂದು ಅವರು ತಿಳಿಸಿದ್ದರು.
ಈ ಹೃದಯಸ್ಪರ್ಶಿ ಕಥೆಗಳು, ಸಾಕುಪ್ರಾಣಿಗಳ ಮೇಲಿನ ಅಪಾರ ಪ್ರೀತಿಯನ್ನು ಮತ್ತು ಅಮೂಲ್ಯವಾದ ಬಾಂಧವ್ಯವನ್ನು ಎತ್ತಿ ತೋರಿಸುತ್ತವೆ.