ಮಂಡ್ಯ: ಅನಾಥಾಶ್ರಮದಲ್ಲಿನ ಊಟ ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 29 ಜನ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವ ಘಟನೆ ನಡೆದಿದೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ 6ನೇ ತರಗತಿಯ ವಿದ್ಯಾರ್ಥಿ ಕೆರ್ಲಾಂಗ್ (13) ಸಾವನ್ನಪ್ಪಿದ್ದು, 29 ಮಕ್ಕಳು ಅಸ್ವಸ್ಥರಾಗಿದ್ದಾರೆ. ಉದ್ಯಮಿಯೊಬ್ಬರು ಶುಕ್ರವಾರ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಊಟ ಸೇವಿಸಿದ ನಂತರ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫುಡ್ ಪಾಯ್ಸನ್ ನಿಂದಾಗಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಡಿಎಚ್ಒ ಡಾ.ಮೋಹನ್ ಈ ಕುರಿತು ಮಾತನಾಡಿದ್ದು, ಮಾರ್ವಾಡಿ ಸಮುದಾಯದವರು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದರು. ಗೋಕುಲಂ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೂ ಅದೇ ಊಟ ವಿತರಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ವಾಂತಿ, ಬೇಧಿ ಶುರುವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಬಂದಿದ್ದರು. ಚೆನ್ನಾಗಿ ಓಡಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ದಿಢೀರ್ ಎಂದು ಸಾವನ್ನಪ್ಪಿದ್ದಾನೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ 27 ಮಂದಿ ಹೊರ ರಾಜ್ಯದವರಾಗಿದ್ದಾರೆ. ಇಬ್ಬರು ಸ್ಥಳೀಯ ವಿದ್ಯಾರ್ಥಿಗಳಾಗಿದ್ದಾರೆ. ಅಸ್ವಸ್ಥಗೊಂಡವರ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.