ಕಾರವಾರ: ವ್ಯಕ್ತಿಯೊಬ್ಬರು ಮಕ್ಕಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಕಾರವಾರ ನಗರದ ಶಂಕರಮಠ ರಸ್ತೆಯ ನಿವಾಸಿ ಕೃಷ್ಣಾನಂದ ಪಾವಸ್ಕರ ಸಾವನ್ನಪ್ಪಿರುವ ವ್ಯಕ್ತಿ. ಇವರು ಕಳೆದ 40 ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡಿಕೊಂಡಿದ್ದರು. ಕೃಷ್ಣಾನಂದರಿಗೆ ಮೂವರು ಮಕ್ಕಳಿದ್ದರು. ಮೂವರಿಗೂ ಮದುವೆ ಮಾಡಿ ಪ್ರತ್ಯೇಕ ಮನೆ ಕೂಡ ನಿರ್ಮಿಸಿ ಕೊಟ್ಟಿದ್ದರು. ಆದರೂ ಮಕ್ಕಳು ಪ್ರತಿ ದಿನ ಕಿರುಕುಳ ಮಾಡುತ್ತಿದ್ದರು ಎಂಬ ಕಾರಣಕ್ಕೆ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಕ್ಕಳಿಗೆ ಸಮನಾಗಿ ಆಸ್ತಿ ಹಂಚಿಕೆ ಮಾಡಿದ್ದರು. ತಮಗೂ ಹಾಗೂ ಪತ್ನಿಗೆ ಕೆಲವು ಆಸ್ತಿ ಇಟ್ಟುಕೊಂಡಿದ್ದರು. ಆದರೆ, ಮಕ್ಕಳು ಆ ಆಸ್ತಿಯ ಮೇಲೆಯೂ ಕಣ್ಣು ಹಾಕಿದ್ದರು. ಇದರಿಂದ ಪ್ರತಿ ದಿನ ಪೀಡಿಸುತ್ತಿದ್ದರು. ಹೀಗಾಗಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೇಸತ್ತ ವ್ಯಕ್ತಿ ತಮ್ಮ ಮನೆಯ ಮುಂದಿರುವ ನಾಲ್ಕು ಮಹಡಿ ಕಟ್ಟಡ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕಟ್ಟಡದಿಂದ ಹಾರಿದ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದನ್ನು ಮರೆತ ಮಕ್ಕಳು, ಮೃತದೇಹದ ಎದುರು ಜಗಳ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.