ಕಲಬುರಗಿ : ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಶೇಷ ಜಾಗೃತಿ ಕಾರ್ಯಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಮುಕ್ತಿ ರಥ ಯಾತ್ರೆಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ.
ಜಿಲ್ಲಾ ಪಂಚಾಯತ್ ಸಿಇಓ ಭವಾಂರ್ ಸಿಂಗ್ ಮೀನಾ ಅವರು ಬಾಲ್ಯ ವಿವಾಹ ಮುಕ್ತಿ ರಥಕ್ಕೆ ಹಸಿರು ನಿಶಾನೆ ತೋರಿಸಿ ಯಾತ್ರೆಗೆ ಚಾಲನೆ ನೀಡಿದರು. ಮುಂದಿನ ಮೂರು ತಿಂಗಳ ಕಾಲ ಈ ರಥ ಯಾತ್ರೆ ಜಿಲ್ಲೆಯಾದ್ಯಂತ ಸಂಚರಿಸಿ, ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ. ರಥದ ಮೇಲೆ ಬಾಲ್ಯ ವಿವಾಹ ವಿರೋಧಿ ಸಂದೇಶಗಳು, ಜಾಗೃತಿ ಫಲಕಗಳು ಅಳವಡಿಸಲಾಗಿದ್ದು, ಜನರಿಗೆ ಮಾಹಿತಿ ನೀಡಲಾಗುತ್ತಿದೆ.
ಬಾಲ್ಯ ವಿವಾಹವು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದು, ಕಾನೂನುಬಾಹಿರವೂ ಆಗಿದೆ. ಬಾಲ್ಯ ವಿವಾಹ ನಡೆಸಿದರೆ ಕಠಿಣ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂಬ ವಿಷಯವನ್ನೂ ಜನರಿಗೆ ತಿಳಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಂಚರಿಸುವ ಈ ರಥ ಯಾತ್ರೆ ಮೂಲಕ ಬಾಲ್ಯ ವಿವಾಹ ನಿರ್ಮೂಲನೆಗೆ ಜನರ ಸಹಕಾರ ಕೋರಲಾಗಿದೆ.
ಇದನ್ನೂ ಓದಿ : ಸಾಲು ಸಾಲು ರಜೆ ಮುಗಿಸಿ ಮರಳಿದ ಜನ | ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್.. ಹೈರಾಣಾದ ವಾಹನ ಸವಾರರು



















