ಬೆಂಗಳೂರು : ಕಾಮಿಡಿ ಸ್ಟಾರ್ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡು ಸಿನೆಮಾ ಪ್ರೇಕ್ಷಕರ ಮನಸ್ಸನ್ನು ಕದ್ದಿದ್ದರು. ಇದೀಗ ಫೈಟರ್ ಖ್ಯಾತಿಯ ನಿರ್ಮಾಪಕ ಸೋಮಶೇಖರ್ ಕಟ್ಟಿಗೆನಹಳ್ಳಿ ಜೊತೆ ಚಿಕ್ಕಣ್ಣ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ.
ಅಯೋಗ್ಯ ಮಹೇಶ್ ಆಕ್ಷನ್-ಕಟ್ ಹೇಳುತ್ತಿರುವ ಈ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಶುರುವಾಗುತ್ತಿದೆ. ಆಕಾಶ್ ಎಂಟರ್ಪ್ರೈಸಸ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರ ಸ್ವಲ್ಪ ಹೆಚ್ಚಿನ ಬಜೆಟ್ ಡಿಮ್ಯಾಂಡ್ ಮಾಡುತ್ತಿದೆ ಎಂದು ಸಿನೆಮಾ ತಂಡ ಹೇಳುತ್ತಿದೆ. ಸಿನೆಮಾ ನಿರ್ಮಾಣಕ್ಕಾಗಿ ಅಂತಿಮ ಹಂತದ ತಯಾರಿ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಸಿನೆಮಾ ತಂಡ ಚಿತ್ರೀಕರಣ ಆರಂಭಿಸಲಿದೆ.
ಕಾಮಿಡಿ ಮತ್ತು ಆಕ್ಷನ್ ಎಲಿಮೆಂಟ್ಸ್ ಚಿತ್ರದಲ್ಲಿರುತ್ತದೆ. ವಿ.ಹರಿಕೃಷ್ಣ ಸಂಗೀತ ಮತ್ತು ಮಾಸ್ತಿ, ರಘು ನಿಡುವಳ್ಳಿ ಹಾಗೂ ರಾಜಶೇಖರ್ ಅವರ ಸಂಭಾಷಣೆ ಸಿನಿಮಾಕ್ಕೆ ಮತ್ತಷ್ಟು ತೂಕ ತಂದು ಕೊಡಲಿದೆ.
ಈ ಸಂಬಂಧಿಸಿದಂತೆ ಕರ್ನಾಟಕ ನ್ಯೂಸ್ ಬೀಟ್ ಜೊತೆಗೆ ಮಾತನಾಡಿದ ಸಿನೆಮಾದ ನಿರ್ಮಾಪಕ ಸೋಮಶೇಖರ್, “ಅಕ್ಟೊಬರ್ ನಲ್ಲಿ ಮುಹೂರ್ತ ಪೂಜೆಯಾದ ಬಳಿಕವೇ ಕಥೆಯ ಗುಟ್ಟು ಬಿಟ್ಟುಕೊಡುತ್ತೇನೆ” ಎಂದು ಹೇಳುವುದರ ಮೂಲಕ ಕುತೂಹಲ ಕೆರಳಿಸಿದ್ದಾರೆ.



















