ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಎಂದರೆ, ಸ್ವಾಭಿಮಾನದ ಸಂಕೇತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಸದಾಶಿವನಗರದ ಬಾಷ್ಯಮ್ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಇಂದು ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು. ಇಂದು ಒಬ್ಬ ಮಹಾನ್ ಪರಾಕ್ರಮಿ, ಹಿಂದೂ ಸಾಮ್ರಾಜ್ಯ ನಿರ್ಮಾಣ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜನ್ಮ ಜಯಂತ್ಯುತ್ಸವ ಎಂದು ಅವರು ತಿಳಿಸಿದರು.
ಭಾಷೆ, ಗಡಿಯನ್ನು ದಾಟಿ ಹಿಂದೂ ಸಾಮ್ರಾಜ್ಯ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ತೊಟ್ಟು, ಹಿಂದೂ ಸಾಮ್ರಾಜ್ಯ ನಿರ್ಮಾಣದಲ್ಲಿ ಯಶಸ್ವಿಯಾಗಿದ್ದ ಪರಾಕ್ರಮಿ. ಅಂಥ ಪರಾಕ್ರಮಿಯ ಜನ್ಮ ಜಯಂತ್ಯುತ್ಸವದ ಅಂಗವಾಗಿ ದೆಹಲಿಯಲ್ಲಿ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಈ ದೇಶದ ಕೋಟ್ಯಂತರ ಯುವಕರಿಗೆ ಶಿವಾಜಿ ಮಹಾರಾಜರು ಒಂದು ಪ್ರೇರಕ ಶಕ್ತಿ ಎಂದು ಅವರು ನುಡಿದರು. ಸೂರ್ಯ- ಚಂದ್ರ ಇರುವತನಕ ಸಹ ಶಿವಾಜಿ ಮಹಾರಾಜರ ಪ್ರೇರಣೆ ಯುವಕರಲ್ಲಿ ಇರಲಿದೆ ಎಂದು ತಿಳಿಸಿದರು. ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವರಾದ ಗೋಪಾಲಯ್ಯ, ಸಿ.ಟಿ. ರವಿ, ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.