ನವದೆಹಲಿ: ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಛಾವಾ ಸಿನಿಮಾಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಸದ್ದು ಮಾಡುತ್ತಿದ್ದು, ಸುಮಾರು 250 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ವರದಿಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ ಛಾವಾ ಸಿನಿಮಾವನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಇದರ ಬೆನ್ನಲ್ಲೇ ಛಾವಾ ಸಿನಿಮಾ (Chhaava Movie) ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಮರಾಠಿ ಸಮ್ಮೇಳನದಲ್ಲಿ ನರೇಂದ್ರ ಮೋದಿ ಅವರು ಮಾತನಾಡಿದರು. ಇದೇ ವೇಳೆ ಛಾವಾ ಸಿನಿಮಾವನ್ನು ಪ್ರಸ್ತಾಪಿಸಿದ ಅವರು, “ಕೆಲ ದಿನಗಳಿಂದ ದೇಶದಲ್ಲಿ ಛಾವಾ ಸಿನಿಮಾ ಹೊಸ ಅಲೆ ಸೃಷ್ಟಿಸುತ್ತಿದೆ. ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಮರಾಠಿ ಸಿನಿಮಾಗಳ ಜತೆಗೆ ಹಿಂದಿ ಸಿನಿಮಾಗಳನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ಛಾವಾ ಸಿನಿಮಾವೇ ಸಾಕ್ಷಿಯಾಗಿದೆ” ಎಂದು ಮೋದಿ ಹೇಳಿದ್ದಾರೆ.
ಸಿನಿಮಾದ ಐತಿಹಾಸಿಕ ಉಲ್ಲೇಖವನ್ನೂ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಶಿವಾಜಿ ಸಾವಂತ್ ಅವರ ಮರಾಠಿ ಪುಸ್ತಕದಿಂದ ಪ್ರೇರೇಪಣೆಗೊಂಡು ಸಿನಿಮಾ ನಿರ್ಮಿಸಲಾಗಿದೆ. ಇದರಿಂದ ಸಂಭಾಜಿ ಮಹಾರಾಜ್ ಅವರ ಶೌರ್ಯವನ್ನು ನಾವು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಛಾವಾ ಸಿನಿಮಾ ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ.
ಛತ್ರಪತಿ ಶಿವಾಜಿನಯ ನಿಧನದ ನಂತರ ಅವರ ಪುತ್ರ ಸಂಭಾಜಿ ಮಹಾರಾಜ್ ಅವರು ಹೇಗೆ ಮೊಘಲರ ವಿರುದ್ಧ ಹೋರಾಡುತ್ತಾರೆ? ಔರಂಗಜೇಬ್ ವಿರುದ್ಧ ಹೋರಾಟ ಹೇಗಿರುತ್ತದೆ? ಇಬ್ಬರ ನಡುವಿನ ಕದನದಲ್ಲಿ ಸಂಭಾಜಿ ಮಹಾರಾಜ್ ಹೇಗೆ ಶೌರ್ಯ ಮೆರೆಯುತ್ತಾರೆ ಎಂಬುದೇ ಛಾವಾ ಸಿನಿಮಾದ ಕಥಾಹಂದರವಾಗಿದೆ.