ಚೆನ್ನೈ: ಶನಿವಾರ ರಾತ್ರಿಯಿಂದೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಮನಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಘಸ್ಫೋಟವೂ ಸಂಭವಿಸಿರುವುದಾಗಿ ವರದಿಯಾಗಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಶನಿವಾರ ರಾತ್ರಿ 10 ರಿಂದ 12 ಗಂಟೆಯ ನಡುವೆ ಧಾರಾಕಾರ ಮಳೆ ಸುರಿದಿದೆ. ಇಂದು (ಆಗಸ್ಟ್ 31) ಬೆಳಿಗ್ಗೆ 8:30 ರವರೆಗಿನ ಮಳೆ ದಾಖಲೆಗಳ ಪ್ರಕಾರ, ಮನಲಿ ವಲಯ 2ರಲ್ಲಿ (ವಿಭಾಗ 19) ಅತಿ ಹೆಚ್ಚು, ಅಂದರೆ 27 ಸೆಂ.ಮೀ ಮಳೆಯಾಗಿದೆ. ನಂತರದ ಸ್ಥಾನದಲ್ಲಿ ನ್ಯೂ ಮನಲಿ ಟೌನ್ (26 ಸೆಂ.ಮೀ) ಮತ್ತು ವಿಮ್ಕೋ ನಗರ್ (23 ಸೆಂ.ಮೀ) ಇವೆ.
ಮನಲಿ ಪ್ರದೇಶದಲ್ಲಿ ಮೇಘಸ್ಫೋಟ:
ಚೆನ್ನೈನ ಮನಲಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪ್ರದೇಶದಲ್ಲಿ ಆರು ಪ್ರತ್ಯೇಕ ಮಳೆಯ ಅವಧಿಗಳಲ್ಲಿ ಗಂಟೆಗೆ 10 ಸೆಂ.ಮೀ.ಗೂ ಹೆಚ್ಚು ಮಳೆ ಸುರಿದಿದೆ, ಇದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ವಿಶ್ವ ಹವಾಮಾನ ಸಂಸ್ಥೆ (WMO) ವ್ಯಾಖ್ಯಾನಿಸಿದ ಮೇಘಸ್ಫೋಟದ ಮಾನದಂಡಗಳನ್ನು ಪೂರೈಸುತ್ತದೆ. ರಾತ್ರಿ 10 ರಿಂದ 11 ಗಂಟೆಯ ನಡುವೆಯೇ ಮನಲಿಯಲ್ಲಿ 106.2 ಮಿ.ಮೀ ಮಳೆ ದಾಖಲಾಗಿದ್ದು, ಮೇಘಸ್ಫೋಟವನ್ನು ಖಚಿತಪಡಿಸಿದೆ.
ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಉತ್ತರ ಭಾರತದಲ್ಲಿ ಮಳೆ, ಮೇಘಸ್ಫೋಟ, ಭೂಕುಸಿತಗಳು ಮುಂದುವರಿದಿದ್ದು, ಹಲವರು ಬಲಿಯಾಗಿರುವಂತೆಯೇ ದಕ್ಷಿಣ ಭಾರತದಲ್ಲೂ ವರುಣನ ಅಬ್ಬರ ತೀವ್ರಗೊಂಡಿದೆ.



















