ಚೆನ್ನೈ: ಖ್ಯಾತ ವೈದ್ಯ, ಅವರ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳ ಮೃತದೇಹ ಗುರುವಾರ ಬೆಳಗ್ಗೆ ತಮಿಳುನಾಡಿನ ಚೆನ್ನೈನ(Chennai) ಅಣ್ಣಾನಗರದ ಮನೆಯಲ್ಲಿ ಪತ್ತೆಯಾಗಿದೆ. ನಾಲ್ವರು ಸದಸ್ಯರಿದ್ದ ಇಡೀ ಕುಟುಂಬ ಆತ್ಮಹತ್ಯೆ(Suicide) ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ವೈದ್ಯರ ಕುಟುಂಬವು ಈ ಕೃತ್ಯ ಎಸಗಿರಬಹುದು ಎಂದೂ ಅಂದಾಜಿಸಲಾಗಿದೆ.
ಧ್ವನಿಶಾಸ್ತ್ರಜ್ಞ ಡಾ.ಬಾಲಮುರುಗನ್, ಅವರ ಪತ್ನಿ, ವಕೀಲೆ ಸುಮತಿ ಮತ್ತು ಅವರ ಪುತ್ರರಾದ ನೀಟ್ ಆಕಾಂಕ್ಷಿ ಜಸ್ವಂತ್ ಕುಮಾರ್ ಮತ್ತು 11 ನೇ ತರಗತಿಯ ವಿದ್ಯಾರ್ಥಿ ಲಿಂಗೇಶ್ ಕುಮಾರ್ ಅವರು ಮನೆಯ ಎರಡು ಕೋಣೆಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಚೆನ್ನೈ ನಗರದಲ್ಲಿ ಹಲವಾರು ಅಲ್ಟ್ರಾಸೌಂಡ್ ಕೇಂದ್ರಗಳನ್ನು ನಡೆಸುತ್ತಿದ್ದ ಡಾ.ಬಾಲಮುರುಗನ್ ಅವರು ವಿಪರೀತ ಸಾಲ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಸಾಲದ ಹೊರೆ ತಾಳಲಾರದೇ ಆತ್ಮಹತ್ಯೆಯ ನಿರ್ಧಾರ ಮಾಡಿರಬಹುದು ಎಂದೂ ಸಂಬಂಧಿಕರು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಬೆಳಗ್ಗೆ, ಬಾಲಮುರುಗನ್ ಅವರ ಚಾಲಕ ಎಂದಿನಂತೆ ಅವರನ್ನು ಕ್ಲಿನಿಕ್‌ಗೆ ಕರೆದೊಯ್ಯಲೆಂದು ಮನೆಗೆ ತಲುಪಿದ್ದರು. ಎಷ್ಟೇ ಬಾಗಿಲು ಬಡಿದರೂ ಯಾರೂ ಬಾಗಿಲು ತೆರೆಯಲಿಲ್ಲ. ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಅವರಿಗೆ ಅನುಮಾನ ಬಂದಿದೆ. ಕೂಡಲೇ ಚಾಲಕನು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ಒಡೆದು ಮನೆ ಪ್ರವೇಶಿಸಿದಾಗ ಮನೆಯ ಎರಡು ಕೋಣೆಗಳಲ್ಲಿ ಡಾ. ಬಾಲಮುರುಗನ್ (52), ಅವರ ಪತ್ನಿ ಸುಮತಿ (47) ಮತ್ತು ಇಬ್ಬರು ಗಂಡು ಮಕ್ಕಳ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದವು.
“ಇದೊಂದು ಆತ್ಮಹತ್ಯೆ ಪ್ರಕರಣ ಎಂಬ ಶಂಕೆಯಿದೆ. ಡಾ. ಬಾಲಮುರುಗನ್ ಅವರು ತುಂಬಾ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಆ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈವರೆಗೆ ಯಾರಿಂದಲೂ ಯಾವುದೇ ಔಪಚಾರಿಕ ದೂರು ಬಂದಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬವು ಆತ್ಮಹತ್ಯೆ ಪತ್ರವನ್ನೇನಾದರೂ ಬರೆದು ಇಟ್ಟಿದೆಯೇ ಅಥವಾ ಅವರು ಲೇವಾದೇವಿಗಾರರಿಂದ ಯಾವುದೇ ಒತ್ತಡಕ್ಕೆ ಒಳಗಾಗಿದ್ದಾರೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ತನಿಖೆ ಬಳಿಕವೇ ನಿಖರ ಕಾರಣ ಹೇಳುವುದಾಗಿ ಪೊಲೀಸರು ತಿಳಿಸಿದ್ದಾರೆ.