ಮಂಡ್ಯ | ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಂಡ್ಯದ ಬಸರಾಳು ಸಮೀಪದ ಕಾರೆಕಟ್ಟೆ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ನಡೆದಿದೆ.
ಬಿಹಾರ ಮೂಲದ ಕಾರ್ಮಿಕರು ಕಾರೆಕಟ್ಟೆಯಿಂದ ಬೇರೆ ಕಡೆಗೆ ಕಾರ್ಖಾನೆ ಶಿಫ್ಟ್ ಮಾಡುತ್ತಿದ್ದ ವೇಳೆ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸ್ಥಳಾಂತರ ಕೆಲಸ ಕಳೆದ ಒಂದು ತಿಂಗಳಿಂದಲೂ ನಡೆಯುತ್ತಿತ್ತು ಎನ್ನಲಾಗಿದ್ದು, ಇಂದು ಕಾರ್ಮಿಕರು ರಾಸಾಯನಿಕ ಟ್ಯಾಂಕ್ ತೆರವು ಮಾಡುತ್ತಿದ್ದ ವೇಳೆ ಅವಘಡ ನಡೆದಿದೆ.
ಇದೇ ಕಾರ್ಖಾನೆಯಲ್ಲಿ 4 ವರ್ಷದ ಹಿಂದೆಯೂ ಅವಘಡ ಸಂಭವಿಸಿತ್ತು. ರಾಸಾಯನಿಕ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು. ಎರಡು ನಾಯಿಗಳು ಮೃತಪಟ್ಟಿದ್ದವು. ಆ ವೇಳೆ ಅದೃಷ್ಟವಶಾತ್ ಜನರ ಪ್ರಾಣ ಹಾನಿಯಾಗಿರಲ್ಲ. ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಪರಿಹಾರ ಕೊಡಿಸಿತ್ತು. ಈವರೆಗೆ ಕಾರ್ಖಾನೆ ಆರಂಭವೇ ಆಗಿರಲಿಲ್ಲ. ಹೀಗಾಗಿ ಮಾಲಿಕ ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡಿಸುತ್ತಿದ್ದ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಮತ್ತೆ ದುರಂತ ಸಂಭವಿಸಿದೆ. ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಲಾಭದಾಸೆ ತೋರಿಸಿ ಹೂಡಿಕೆ | ದಾವಣಗೆರೆಯಲ್ಲಿ ಮಹಿಳಾ ಟೆಕ್ಕಿಗೆ 93 ಲಕ್ಷ ವಂಚನೆ



















