ಹುಬ್ಬಳ್ಳಿ : ಕೆಲಸ ಮಾಡಿ ಮಲಗಿದ್ದ ನಾಲ್ವರು ಕೆಮಿಕಲ್ ರಿಯಾಕ್ಷನ್‌ನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಸಂಬಂಧ ಚಿಕಿತ್ಸೆ ಫಲಿಸದೆ ಓರ್ವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ರಾಮನಗರ ಮೂಲದ ಕಾರ್ಮಿಕ ಅಮ್ಜದ್ ಪಾಷಾ(26) ಮೃತ ದುರ್ದೈವಿಯಾಗಿದ್ದು, ಕಳೆದ 3 ದಿನಗಳಿಂದ ಕಿಮ್ಸ್ನಲ್ಲಿ ಅಮ್ಜದ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದ ಮೂವರಾದ ಜಾಫರ್, ಜಬಿ, ಹೈದರ್ಗೆ ಚಿಕಿತ್ಸೆ ಮುಂದುವರಿದೆ.
ಏನಾಗಿತ್ತು?
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜಮಾಲಸಾಬ್ ಪಾಳ್ಯಾ ನಿವಾಸಿಗಳಾದ ಅಮ್ಜದ್ ಪಾಶಾ, ಹೈದರ್, ಜಬಿ, ಜಾಫರ್ ಎಂಬ ನಾಲ್ವರು ಕಾರ್ಮಿಕರು ದೊಡ್ಡ ದೊಡ್ಡ ಅಂಗಡಿಗಳ LED ವಾಲ್ ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದರು.
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಡ್ರೈಪ್ರೂಟ್ಸ್ ಅಂಗಡಿಯೊಂದು ಆರಂಭವಾಗುತ್ತಿದ್ದು, ಆ ಆಂಗಡಿಯ ಇಂಟಿರಿಯರ್ ವರ್ಕ್ ಮತ್ತು LED ಕೆಲಸ ಮಾಡಲು ಲಾರಿ ಚಾಲಕ ಅಲಿಂ ಸೇರಿ ಐವರು ಹತ್ತು ದಿನದ ಹಿಂದೆ ಬಂದಿದ್ದರು. ಮಾರ್ಚ್ 16ರಂದು ರೋಜಾ ಇದ್ದ ನಾಲ್ವರು ರಾತ್ರಿ ಊಟ ಮಾಡಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದರು.
ಅಂಗಡಿಯ ಶೆಟರ್ ಹಾಕಿಕೊಂಡು ಒಳಗಡೆ ನಾಲ್ವರು ಕಾರ್ಮಿಕರು ಮಲಗಿದ್ದರೆ, ಲಾರಿ ಚಾಲಕ ಅಲೀಂ ಹೊರಗಡೆ ಇದ್ದ ತನ್ನ ಲಾರಿಯಲ್ಲಿ ಮಲಗಿದ್ದ. ಆದ್ರೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಮಿಕಲ್ ರಿಯಾಕ್ಷನ್ ಸಮಸ್ಯೆಯಿಂದ ಮಲಗಿದ್ದಲ್ಲೇ ಕಾರ್ಮಿಕರು ಅಸ್ವಸ್ಥರಾಗಿದ್ದರು. ಮಾರ್ಚ್ 17ರಂದು ಮುಂಜಾನೆ ಒಂಭತ್ತು ಗಂಟೆಯಾದರೂ ಇವರು ಎದ್ದು ಹೊರಗೆ ಬಾರದ ಇದ್ದಾಗ ಲಾರಿ ಚಾಲಕ ಅಲೀಂ, ಶೆಟರ್ ಓಪನ್ ಮಾಡಿ ನಿರ್ಮಾಣ ಹಂತದ ಅಂಗಡಿಯೊಳಗೆ ಹೋಗಿದ್ದಾನೆ. ಆಗ ನಾಲ್ವರು ಪ್ರಜ್ಞೆ ಇಲ್ಲದೇ ಬಿದ್ದಿರುವುದನ್ನು ಕಂಡಿದ್ದಾನೆ.
ಬಾಯಲ್ಲಿ ಬುರುಗು ಬರುತ್ತಿದ್ದ ಹಿನ್ನೆಲೆ ಕೂಡಲೇ ಸ್ಥಳೀಯರಿಗೆ ಮತ್ತು ಅಂಗಡಿ ಮಾಲೀಕರಿಗೆ ಆತ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಆಂಬುಲೆನ್ಸ್ ಕರೆಯಿಸಿ ನಾಲ್ವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಿದ್ದರು. ಆದ್ರೆ, ಮೂರು ದಿನಗಳ ಸಾವು ಬದುಕಿನ ಹೋರಾಟ ನಡೆಸಿದ ಅಮ್ಜದ್ ಪಾಷಾ ಇಂದು ಹುಬ್ಬಳ್ಳಿ ಕಿಮ್ಸ್ನಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ ; ಗೇರುಸೊಪ್ಪ ಆಂಜನೇಯ ಸ್ವಾಮಿ ಆಶೀರ್ವಾದ ಪಡೆದ ಟೀಂ ಇಂಡಿಯಾ ಥ್ರೋಡೌನ್ ಸ್ಪೆಷಲಿಸ್ಟ್



















