ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಪೊಲೀಸ್ ಪೇದೆ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ನಗರ ಸಶಸ್ತ್ರ ಮೀಸಲು ಪ್ರಧಾನ ಕಚೇರಿ (CAR) ಯ ಹೆಡ್ ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಕುಮಾರ್ ಎಂಬುವವರ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಪ್ರಶಾಂತ್ ಕುಮಾರ್ ಕೋಟ್ಯಾಂತರ ರೂ. ವಂಚಿಸಿದ್ದಾನೆ ಎನ್ನಲಾಗಿದೆ.
ಆರೋಪಿಯ ವಿರುದ್ಧ ಮಹಾಲಕ್ಷ್ಮೀ ಲೇಔಟ್ ನಿವಾಸಿ ಭಾಗ್ಯಮ್ಮ ಎಂಬ ಮಹಿಳೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿಯು 2011ರಲ್ಲಿ ದೂರುದಾರೆ ಭಾಗ್ಯಮ್ಮ ಅವರಿಗೆ ಪರಿಚಯವಾಗಿದ್ದ. ಈ ವೇಳೆ ಮಹಿಳೆಯ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ.
ನನಗೆ ದೊಡ್ಡ ದೊಡ್ಡ ಅಧಿಕಾರಿಗಳಿದ್ದಾರೆ ಎಂದು ಹೇಳಿ ನಂಬಿಸಿ ಇಬ್ಬರು ಮಕ್ಕಳಿಗೆ ಮೂರು ತಿಂಗಳಲ್ಲಿ ಎಫ್ಡಿಎ, ಎಸ್ಡಿಎ ಶ್ರೇಣಿಯ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಇದಕ್ಕಾಗಿ 25 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ನಂತರ ಮಂಜುನಾಥ್ ಪ್ರಸಾದ್ ಎಂಬುವರನ್ನು ತನ್ನ ಪಿಎ ಎಂದು ಭಾಗ್ಯಮ್ಮ ಅವರಿಗೆ ಪರಿಚಯ ಮಾಡಿಸಿದ್ದಾನೆ. ನಂತರ ಆರೋಪಿಗಳು ಭಾಗ್ಯಮ್ಮ ಅವರಿಂದ ಒಟ್ಟು 47 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಜೊತೆಗೆ 857 ಗ್ರಾಂ. ಚಿನ್ನಾಭರಣ ಪಡೆದಿದ್ದಾರೆ. ಆನಂತರ ಯಾವ ನೌಕರಿಯನ್ನೂ ಕೊಡಿಸದೆ ವಂಚಿಸಿದ್ದಾರೆ. ವಂಚಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ದೂರು ದಾಖಲಿಸಿದ್ದಾರೆ.
ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಶಾಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.