ಹೈದರಾಬಾದ್: ಹೈದರಾಬಾದ್‌ನಲ್ಲಿ ಗುರುವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು(Hyderabad Rain), ಗುರುವಾರ ಐತಿಹಾಸಿಕ ಚಾರ್ಮಿನಾರ್ನ ಒಂದು ಮಿನಾರ್‌ನ ಭಾಗವು ಉರುಳಿ ಬಿದ್ದಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯು ಗುರುವಾರ ಸಂಜೆ ಸುಮಾರು 4:30 ಗಂಟೆಗೆ ನಡೆದಿದ್ದು, ಭಾರೀ ಮಳೆಯಿಂದಾಗಿ ಚಾರ್ಮಿನಾರ್‌ನ ಈಶಾನ್ಯ ಮಿನಾರ್‌ನ ಒಂದು ಭಾಗವು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಚಾರ್ಮಿನಾರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಹೈದರಾಬಾದ್‌ನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವೆಡೆ ಹಾನಿಗಳೂ ವರದಿಯಾಗಿವೆ. ಚಾರ್ಮಿನಾರ್‌ನಂತಹ ಪ್ರಮುಖ ಸ್ಮಾರಕಕ್ಕೂ ಹಾನಿಯಾಗಿದೆ. ಕುಸಿದ ಭಾಗವು ಚಾರ್ಮಿನಾರ್‌ನ ಈಶಾನ್ಯ ಮಿನಾರ್‌ನ ಮೇಲಿನ ಅಲಂಕಾರಿಕ ಸ್ಟಕ್ಕೊ ಆಗಿದ್ದು, ಇದು ಭಾಗ್ಯಲಕ್ಷ್ಮೀ ದೇವಸ್ಥಾನದ ಸಮೀಪದಲ್ಲೇ ಬಿದ್ದಿದೆ. ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅವಶೇಷಗಳನ್ನು ತೆರವುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಎಸ್‌ಐ ಅಧಿಕಾರಿಗಳ ಪ್ರಕಾರ, ಈ ಸ್ಟಕ್ಕೊ ರಚನೆಯು ಸುಣ್ಣದ ಗಾರೆಯಿಂದ ಮಾಡಲ್ಪಟ್ಟಿದ್ದು, ಇದು ತೇವಾಂಶದಿಂದಾಗಿ ಕುಸಿದಿರಬಹುದು ಎನ್ನಲಾಗಿದೆ.
ಈ ಘಟನೆಯು ಐತಿಹಾಸಿಕ ಚಾರ್ಮಿನಾರ್‌ನ ಸಂರಕ್ಷಣೆಯ ಬಗ್ಗೆ ಆತಂಕವನ್ನೂ ಹುಟ್ಟುಹಾಕಿದೆ. 1591ರಲ್ಲಿ ಸುಲ್ತಾನ್ ಮೊಹಮ್ಮದ್ ಕುಲಿ ಕುತುಬ್ ಶಾ ಅವರು ನಿರ್ಮಿಸಿದ ಈ ಸ್ಮಾರಕವು ಹೈದರಾಬಾದ್‌ನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಇದಕ್ಕೂ ಮೊದಲು 2019ರಲ್ಲಿ ದಕ್ಷಿಣ-ಪಶ್ಚಿಮ ಮಿನಾರ್‌ನ ಒಂದು ದೊಡ್ಡ ಭಾಗವು ಉರುಳಿ ಬಿದ್ದಿತ್ತು.
ಮಳೆಯಿಂದಾಗಿ ಭಾರೀ ಹಾನಿ
ಗುರುವಾರದ ಸುರಿದ ಮಳೆಯಿಂದಾಗಿ ಹೈದರಾಬಾದ್‌ನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ದಾಬೀಪುರ, ಬಂಜಾರಾ ಹಿಲ್ಸ್ ರಸ್ತೆ ಸಂಖ್ಯೆ 10, ಕೃಷ್ಣಾ ನಗರ ಮತ್ತು ಹಕೀಂಪೇಟ್‌ನಂತಹ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ತೆಲಂಗಾಣ ಮುಖ್ಯಮಂತ್ರಿ ಕಚೇರಿಯ ಪ್ರಕಾರ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದು, ಪರಿಹಾರ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಸರ್ಕಾರವು ನಗರದಲ್ಲಿ ಮಳೆಯಿಂದ ಉಂಟಾದ ತೊಂದರೆಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೈದರಾಬಾದ್‌ಗೆ ಹಳದಿ ಎಚ್ಚರಿಕೆಯನ್ನು ಜಾರಿಗೊಳಿಸಿದೆ. ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಸರ್ಕಾರ, ಎಎಸ್‌ಐ ಪರಿಶೀಲನೆ
ಘಟನೆಯ ನಂತರ ಎಎಸ್‌ಐ ತಂಡವು ಸ್ಥಳಕ್ಕೆ ಭೇಟಿ ನೀಡಿ ಚಾರ್ಮಿನಾರ್ ಗೆ ಆಗಿರುವ ಹಾನಿಯನ್ನು ಪರಿಶೀಲಿಸಿದೆ. ಶುಕ್ರವಾರ ಬೆಳಗ್ಗೆ ಎಂಜಿನಿಯರ್‌ಗಳು ಮತ್ತು ತಜ್ಞರ ತಂಡವು ಚಾರ್ಮಿನಾರ್‌ನ ಪುನರ್‌ಸ್ಥಾಪನೆಗೆ ಅಗತ್ಯವಾದ ಕ್ರಮಗಳ ಬಗ್ಗೆ ನಿರ್ಧಾರಗಳನ್ನೂ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.