ನವದೆಹಲಿ: ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡುವ ವಿಚಾರವು ರಾಜ್ಯಸಭೆಯಲ್ಲಿ ಸೋಮವಾರ ಕೋಲಾಹಲ ಸೃಷ್ಟಿಸಿದೆ. ಮುಸ್ಲಿಮರಿಗೆ ಮೀಸಲು ವಿಚಾರದಲ್ಲಿ ಪಕ್ಷದ ನಿಲುವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟಪಡಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ. ಭಾರೀ ಗದ್ದಲ ಸೃಷ್ಟಿಯಾದ ಕಾರಣ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ರಾಜ್ಯದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡುವ ಮಸೂದೆಯ ಬಗ್ಗೆ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು,”ಸಂವಿಧಾನ ಬದಲಾಗುತ್ತದೆ” ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿದೆ.
ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ ಬಿಜೆಪಿ ಸಂಸದ ಕಿರಣ್ ರಿಜಿಜು, “ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಮತ್ತು ಜವಾಬ್ದಾರಿಯುತ ನಾಯಕರೊಬ್ಬರು ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಲು ಭಾರತದ ಸಂವಿಧಾನವನ್ನು ಬದಲಾಯಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ನಾವು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ” ಎಂದಿದ್ದಾರೆ.

ಅಲ್ಲದೇ, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ. “ಮುಸ್ಲಿಂ ಮೀಸಲಾತಿಯ ವಿಷಯವನ್ನು ಎತ್ತುವ ಮೂಲಕ ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಘನತೆಗೆ ಧಕ್ಕೆ ತಂದಿದೆ. ನಿಮಗೆ ಧೈರ್ಯವಿದ್ದರೆ ಇಂದೇ ಉಪಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಡಿಕೆ ಶಿವಕುಮಾರ್‌ಗೆ ಸೂಚಿಸಿ’ ಎಂದು ಕಿರಣ್ ರಿಜಿಜು ಕಾಂಗ್ರೆಸ್ ನಾಯಕರಿಗೆ ಸವಾಲೆಸೆದಿದ್ದಾರೆ. ಕಾಂಗ್ರೆಸ್ ಪಕ್ಷವು ದೇಶವನ್ನು ಮತ್ತೆ ವಿಭಜಿಸಲು ಪ್ರಯತ್ನಿಸುತ್ತಿದೆ ಎಂದೂ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಯಾರಿಂದಲೂ ಮೀಸಲಾತಿಯನ್ನು ಕೊನೆಗಾಣಿಸಲೂ ಸಾಧ್ಯವಿಲ್ಲ. ಅದನ್ನು ರಕ್ಷಿಸಲೆಂದೇ ನಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿದ್ದು. ಭಾರತವನ್ನು ಒಡೆಯುತ್ತಿರುವವರು ಅವರು ಎಂದು ಎನ್‌ಡಿಎ ಸಂಸದರತ್ತ ಬೆರಳು ತೋರಿಸುತ್ತಾ ನುಡಿದಿದ್ದಾರೆ.
ಸದನದ ನಾಯಕ ಜೆ.ಪಿ.ನಡ್ಡಾ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, “ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗದು ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಹೀಗಿರುವಾಗ ಅಗತ್ಯವಿದ್ದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹೇಳಿಕೆ ನೀಡುತ್ತಾರೆ” ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನಾಯಕ ಸಂಬಿತ್ ಪಾತ್ರಾ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ಸಂವಿಧಾನದಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಪರಿಚಯಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ವಿರೋಧಿಸಿದ ಕ್ರಮವನ್ನು ಕಾಂಗ್ರೆಸ್ ಜಾರಿ ಮಾಡಲು ಹೊರಟಿದೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಸಾಮಾನ್ಯ ನಾಯಕರಲ್ಲ. ಅವರು ಗಾಂಧಿ ಕುಟುಂಬಕ್ಕೆ, ರಾಹುಲ್ ಗಾಂಧಿಗೆ ಬಹಳ ಹತ್ತಿರದವರು. ನೆಹರೂ ತಮ್ಮ ಮಹತ್ವಾಕಾಂಕ್ಷೆಯನ್ನು ಜೀವಂತವಾಗಿಡಲು ರಾಷ್ಟ್ರವನ್ನು ವಿಭಜಿಸಿದರು. ತಾವು ಪ್ರಧಾನಿಯಾಗಬೇಕೆಂದು ಅವರು ಧರ್ಮದ ಆಧಾರದ ಮೇಲೆ ತಾಯಿ ಭಾರತಿಯನ್ನು ಎರಡು ಭಾಗಗಳಾಗಿ ವಿಂಗಡಿಸಿದರು… ಇಂದು, ಗಾಂಧಿ ಕುಟುಂಬವು ಅದನ್ನೇ ಮಾಡುತ್ತಿದೆ” ಎಂದು ಪಾತ್ರಾ ಆರೋಪಿಸಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿದ ಡಿ.ಕೆ.ಶಿವಕುಮಾರ್
ಈ ನಡುವೆ, ವಿವಾದದ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗಿಂತ ನಾನು ಹೆಚ್ಚು ಹಿರಿಯ ಮತ್ತು ಸಂವೇದನಾಶೀಲ ರಾಜಕಾರಣಿ. ಜನರ ಹಾದಿ ತಪ್ಪಿಸಲು ಬಿಜೆಪಿ ನನ್ನ ಹೇಳಿಕೆಯನ್ನು ತಿರುಚುತ್ತಿದೆ” ಎಂದಿದ್ದಾರೆ.
“ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ನಾನು ಎಂದಾದರೂ ಎಲ್ಲಿ ಹೇಳಿದ್ದೇನೆ? ಸಂವಿಧಾನವನ್ನು ರಕ್ಷಿಸಲೆಂದೇ ನಾವಿಲ್ಲಿದ್ದೇವೆ- ಅದು ನಮ್ಮ ಜನ್ಮಸಿದ್ಧ ಹಕ್ಕು. ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ” ಎಂದೂ ಡಿಕೆಶಿ ಹೇಳಿದ್ದಾರೆ.