ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ವ್ಯತ್ಯಯ ಸತತ ಮೂರನೇ ದಿನವೂ ಮುಂದುವರಿದಿದ್ದು, ಗುರುವಾರವೂ ನೂರಾರು ವಿಮಾನಗಳು ರದ್ದಾಗಿವೆ. ಸಿಬ್ಬಂದಿ ಕೊರತೆ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದಾಗಿ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ.
ನೂರಾರು ವಿಮಾನಗಳು ರದ್ದು
ಇಂಡಿಗೋ ಸಂಸ್ಥೆಯ ವಿಮಾನಗಳ ಹಾರಾಟದಲ್ಲಿನ ಗೊಂದಲ ಗುರುವಾರ ತಾರಕಕ್ಕೇರಿದೆ. ಮೂಲಗಳ ಪ್ರಕಾರ, ಗುರುವಾರ ಒಂದೇ ದಿನ ಸುಮಾರು 170ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಬುಧವಾರ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಬೇಕಿದ್ದ ಸುಮಾರು 200 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಗುರುವಾರ ಮುಂಜಾನೆಯೇ ದೆಹಲಿಯಿಂದ ಹೊರಡಬೇಕಿದ್ದ 30ಕ್ಕೂ ಹೆಚ್ಚು ವಿಮಾನಗಳು ಮತ್ತು ಹೈದರಾಬಾದ್ನಲ್ಲಿ 33 ವಿಮಾನಗಳು ರದ್ದಾಗಿವೆ. ಇದರಿಂದಾಗಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ದಿಕ್ಕು ತೋಚದಂತಾಗಿದ್ದಾರೆ.

ಸಮಸ್ಯೆಗೆ ಪ್ರಮುಖ ಕಾರಣಗಳೇನು?
ಈ ಅವ್ಯವಸ್ಥೆಗೆ ಪ್ರಮುಖ ಕಾರಣ ವಿಮಾನ ಸಿಬ್ಬಂದಿಯ ಕೊರತೆ, ಅದರಲ್ಲೂ ಮುಖ್ಯವಾಗಿ ಪೈಲಟ್ಗಳ ಅಲಭ್ಯತೆ ಎಂದು ಹೇಳಲಾಗುತ್ತಿದೆ. ನವೆಂಬರ್ 1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ‘ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್’ (FDTL) ನಿಯಮಗಳು ಸಂಸ್ಥೆಯ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿವೆ. ಹೊಸ ನಿಯಮಗಳ ಪ್ರಕಾರ ಪೈಲಟ್ಗಳಿಗೆ ವಿಶ್ರಾಂತಿ ಅವಧಿಯನ್ನು ಹೆಚ್ಚಿಸಲಾಗಿದ್ದು, ವಾರಕ್ಕೆ 48 ಗಂಟೆಗಳ ವಿಶ್ರಾಂತಿ ಕಡ್ಡಾಯಗೊಳಿಸಲಾಗಿದೆ. ಜತೆಗೆ ರಾತ್ರಿ ಪಾಳಿಯ ಅವಧಿಯನ್ನು ವಿಸ್ತರಿಸಿ, ರಾತ್ರಿ ವೇಳೆ ಲ್ಯಾಂಡಿಂಗ್ಗಳ ಸಂಖ್ಯೆಯನ್ನು ಆರರಿಂದ ಎರಡಕ್ಕೆ ಇಳಿಸಲಾಗಿದೆ. ಈ ಹೊಸ ಮಾನದಂಡಗಳು ಮತ್ತು ಚಳಿಗಾಲದ ಹವಾಮಾನ ವೈಪರೀತ್ಯಗಳು ಒಟ್ಟಾಗಿ ವಿಮಾನಯಾನ ಸೇವೆಯ ಮೇಲೆ ಗಂಭೀರ ಪರಿಣಾಮ ಬೀರಿವೆ.
ಕ್ಷಮೆಯಾಚಿಸಿದ ಇಂಡಿಗೋ
ತನ್ನ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆ, ಪ್ರಯಾಣಿಕರಿಗೆ ಆಗಿರುವ ಅನಾನುಕೂಲಕ್ಕಾಗಿ ಕ್ಷಮೆಯಾಚಿಸಿದೆ. ಸಣ್ಣ ತಾಂತ್ರಿಕ ದೋಷಗಳು, ಹವಾಮಾನ ವೈಪರೀತ್ಯ ಮತ್ತು ನೂತನ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಜಾರಿಯಂತಹ ಅನಿರೀಕ್ಷಿತ ಸವಾಲುಗಳು ಒಟ್ಟಾಗಿ ಕಾರ್ಯಾಚರಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಮುಂದಿನ 48 ಗಂಟೆಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿ, ವಿಮಾನಗಳ ಹಾರಾಟವನ್ನು ಸಹಜ ಸ್ಥಿತಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಡಿಜಿಸಿಎ ಗರಂ, ತುರ್ತು ಸಭೆ
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಗುರುವಾರ ಇಂಡಿಗೋ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದೆ. ವಿಮಾನ ರದ್ದು ಮತ್ತು ವಿಳಂಬಕ್ಕೆ ನಿಖರ ಕಾರಣಗಳನ್ನು ನೀಡುವಂತೆ ಹಾಗೂ ಸಮಸ್ಯೆಯನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ. ಡಿಜಿಸಿಎ ಅಂಕಿಅಂಶಗಳ ಪ್ರಕಾರ, ನವೆಂಬರ್ ತಿಂಗಳಲ್ಲಿ ಒಟ್ಟು 1,232 ಇಂಡಿಗೋ ವಿಮಾನಗಳು ರದ್ದಾಗಿದ್ದು, ಇದರಲ್ಲಿ 755 ವಿಮಾನಗಳು ಸಿಬ್ಬಂದಿ ಮತ್ತು ಎಫ್ಡಿಟಿಎಲ್ ಮಿತಿಗಳ ಕಾರಣದಿಂದಲೇ ರದ್ದಾಗಿವೆ. ಸಂಸ್ಥೆಯ ‘ಸಮಯಪಾಲನೆ’ (On Time Performance) ಅಕ್ಟೋಬರ್ನಲ್ಲಿ ಶೇ. 84.1 ರಷ್ಟಿದ್ದುದು, ನವೆಂಬರ್ನಲ್ಲಿ ಶೇ. 67.7ಕ್ಕೆ ಕುಸಿದಿದೆ.
ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಸಂಚಾರ್ ಸಾಥಿ ಆ್ಯಪ್ ಏಕಿರಬೇಕು? ಏನಿದರ ಉಪಯೋಗಳು?


















