ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿಯಲ್ಲಿ ಈಗ ಚನ್ನಪಟ್ಟಣ ಟಿಕೆಟ್ ನ ಹಗ್ಗ-ಜಗ್ಗಾಟ ಶುರುವಾಗಿದೆ. ಈ ಮಧ್ಯೆ ಬಿಜೆಪಿಯ ನಾಯಕರು ಟಿಕೆಟ್ ಗಾಗಿ ಚರ್ಚೆ ನಡೆಸುತ್ತಿದ್ದು, ಈ ಚರ್ಚೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದೆ.
ಬಿಜೆಪಿಯ ಹಲವು ಹಿರಿಯ ನಾಯಕರು ದೆಹಲಿಯಲ್ಲಿ ವರಿಷ್ಠರ ಜತೆ ಸರಣಿ ಸಭೆ ನಡೆಸಿದರೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಣಿಸಿಕೊಳ್ಳದಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಪಕ್ಷದ ನಾಯಕರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಅರವಿಂದ್ ಬೆಲ್ಲದ, ಸಿ.ಪಿ. ಯೋಗೇಶ್ವರ್ ದೆಹಲಿಗೆ ತೆರಳಿದ್ದಾರೆ. ಅಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಆದರೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತ್ರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗಾಗಿಯೇ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಮಧ್ಯೆ ಈಗ ಟಿಕೆಟ್ ಗಾಗಿ ಫೈಟ್ ನಡೆದಿದೆ. ಈ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆಂದು ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಆದರೆ, ತನ್ನ ಕ್ಷೇತ್ರ ಬಿಟ್ಟು ಕೊಡಲು ಜೆಡಿಎಸ್ ಒಪ್ಪುತ್ತಿಲ್ಲ. ಹೀಗಾಗಿಯೇ ದೋಸ್ತಿ ಮಧ್ಯೆ ಫೈಟ್ ಆರಂಭವಾಗಿದೆ.
ಈ ಕ್ಷೇತ್ರದ ಟಿಕೆಟ್ ನಿಂದಾಗಿ ವಿಜಯೇಂದ್ರ ತಟಸ್ಥ ನಿಲುವು ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಯೋಗೇಶ್ವರ್ ಕೂಡ ಈ ವಿಷಯದಲ್ಲಿ ವಿಜಯೇಂದ್ರ ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಇತರ ನಾಯಕರೊಂದಿಗೆ ತಮ್ಮ ಟಿಕೆಟ್ ಬಗ್ಗೆ ಚರ್ಚಿಸಿದರೂ ವಿಜಯೇಂದ್ರ ಬಳಿ ಈ ವಿಷಯ ಪ್ರಸ್ತಾಪಿಸಿಲ್ಲ. ಈ ಕಾರಣದಿಂದಾಗಿಯೇ ವಿಜಯೇಂದ್ರ ಮೌನ ವಹಿಸಿರಬಹುದು ಎನ್ನಲಾಗುತ್ತಿದೆ. ಆದರೆ, ಚನ್ನಪಟ್ಟಣ ಯಾರ ಪಾಲಿಗೆ ಬೀಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.