ಬೆಂಗಳೂರು: ಗ್ರಾಹಕರ ಸುರಕ್ಷತೆ, ಉತ್ತಮ ಸೇವೆಗಳನ್ನು ನೀಡುವ ದಿಸೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈಗ ಬ್ಯಾಂಕ್ ಖಾತೆಗಳ ನಾಮಿನಿಗಳ ಸೇರ್ಪಡೆ ವಿಷಯಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕಾಗಿ ಬ್ಯಾಂಕುಗಳ ಸಲಹೆ-ಸೂಚನೆಗಳನ್ನೂ ಕೇಳಿದೆ.
ಹೌದು, ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ನಾಮಿನಿಗಳು ಅಥವಾ ನಾಮನಿರ್ದೇಶಿತರ ಹೆಸರನ್ನು ಉಲ್ಲೇಖಿಸುವುದು ಪ್ರಮುಖ ಸಂಗತಿಯಾಗಿದೆ. ಇನ್ನುಮುಂದೆ, ನಾಮಿನಿಗಳ ವಿವರದ ಜತೆಗೆ ಅವರ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಕೂಡ ನಮೂದಿಸುವ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.
ನಾಮಿನಿಗಳ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ನಾಮನಿರ್ದೇಶನ ಮಾಡುವಾಗ ನಮೂದಿಸಿದರೆ, ಬ್ಯಾಂಕ್ ಖಾತೆದಾರರು ಅಕಸ್ಮಾತ್ ತೀರಿಕೊಂಡರೆ, ನಾಮಿನಿಗಳನ್ನು ಸಂಪರ್ಕಿಸಿ, ಠೇವಣಿ, ಗಳಿಕೆಯ ಮೊತ್ತವನ್ನು ಸುಲಭವಾಗಿ ವಿತರಿಸಲು ಸಾಧ್ಯವಾಗಲಿದೆ ಎಂಬುದು ಆರ್ ಬಿ ಐ ಚಿಂತನೆ ಹಿಂದಿನ ಉದ್ದೇಶ ಎಂದು ತಿಳಿದುಬಂದಿದೆ.
ಬ್ಯಾಂಕ್ ಖಾತೆದಾರರು ತೀರಿಕೊಂಡ ಬಳಿಕ ಅವರು ನಮೂದಿಸಿದ ನಾಮಿನಿಗಳು ಕ್ಲೇಮ್ ಮಾಡದ ಕಾರಣ ಬ್ಯಾಂಕುಗಳಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿಯುತ್ತದೆ. 2024-25ನೇ ಹಣಕಾಸು ವರ್ಷದಲ್ಲಿ ಬ್ಯಾಂಕುಗಳಲ್ಲಿ ಹೀಗೆ 7,946 ಕೋಟಿ ರೂ. ಕ್ಲೇಮ್ ಆಗದೆ ಉಳಿದಿದೆ. 2023-24ನೇ ಸಾಲಿನಲ್ಲಿ 11,794 ಕೋಟಿ ರೂ. ಅನ್ ಕ್ಲೇಮ್ ಹಣ ಹಾಗೆಯೇ ಉಳಿದಿದೆ ಎಂದು ತಿಳಿದುಬಂದಿದೆ.