ಬೆಂಗಳೂರು : ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿದ್ದ ಗಾಯಕ ಸೋನು ನಿಗಮ್ ಅವರಿಗೆ ಕನ್ನಡ ಚಿತ್ರರಂಗ ಅವರಿಗೆ ಅಸಹಕಾರ ತೋರಿತ್ತು. ಕ್ಷಮೆ ಕೇಳುವವರೆಗೆ ಅವರಿಂದ ಹಾಡು ಹಾಡಿಸದಿರಲು ನಿರ್ಧರಿಸಿತ್ತು. ಕೆಲವು ನಿರ್ಮಾಪಕರು ಕೂಡಾ ತಮ್ಮ ಸಿನಿಮಾದಲ್ಲಿನ ಸೋನು ಹಾಡನ್ನು ತೆಗೆದುಹಾಕಿ, ಬೇರೆ ಗಾಯಕರಿಂದ ಹಾಡಿಸಲು ಮುಂದಾಗಿದ್ದರು. ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋನು ನಿಗಮ್ ಅವರ ಅಸಹಕಾರವನ್ನು ಹಿಂದಕ್ಕೆ ಪಡೆದಿದೆ.
ಈ ಮೂಲಕ ಸೋನು ಅವರಿಂದ ಹಾಡಿಸುವವರಿಗೆ ಹಾಗೂ ಈಗಾಗಲೇ ಹಾಡಿರುವ ಸಿನಿಮಾಗಳಿಗೆ ಯಾವುದೇ ತೊಂದರೆ ಇಲ್ಲ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಎಂ. ನರಸಿಂಹಲು, “ಸೋನು ನಿಗಮ್ ಅವರು ಈಗಾಗಲೇ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇನ್ನು ಅವರ ಮೇಲಿನ ನಿರ್ಬಂಧವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಇದರಿಂದ ನಮ್ಮ ನಿರ್ಮಾಪಕರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇವೆ’ ಎನ್ನುತ್ತಾರೆ. ಈ ನಿರ್ಧಾರದ ಬೆನ್ನಲ್ಲೇ “ನಿದ್ರಾದೇವಿ ನೆಕ್ಸ್ ಡೋರ್’ ಸಿನಿಮಾ ತಂಡ ಸೋನು ಹಾಡನ್ನು ಚಿತ್ರದಲ್ಲಿ ಮುಂದುವರೆಸುತ್ತಿದೆ.



















