ನಟನೆ, ನಿರ್ಮಾಣ, ನಿರ್ದೇಶನ, ರಂಗಭೂಮಿ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಬಿ.ಸುರೇಶ ಮತ್ತು ನಟಿ, ನಿರ್ಮಾಪಕಿ ಶೈಲಜಾ ನಾಗ್ ಅವರ ಪುತ್ರಿ ಚಂದನಾ ನಾಗ್ ಈಗ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ಸ್ನೇಹಾ ಕಪ್ಪಣ್ಣ ಅವರ ಭ್ರಮರಿ ನಾಟ್ಯಶಾಲೆಯಲ್ಲಿ ಕಲಿಯುತ್ತಿರುವ ಚಂದನಾ ಎಸ್. ನಾಗ್ ಏ. 20ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿನ ADA ರಂಗಮಂದಿರದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ.
ಕಾರ್ಯಕ್ರಮಕ್ಕೆ ನೂಪುರ ಸ್ಕೂಲ್ ಆಫ್ ಭರತನಾಟ್ಯಂನ ನಿರ್ದೇಶಕಿ ಗುರು ಡಾ. ಲಲಿತಾ ಶ್ರೀನಿವಾಸನ್, ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಗುರು ಶುಭಾ ಧನಂಜಯ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನಟಿಯಾಗಿ, ಬರಹಗಾರ್ತಿಯಾಗಿ, ನೃತ್ಯಗಾರ್ತಿಯಾಗಿ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿರುವ ಚಂದನಾ, ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವಿಷುಯಲ್ ಕಮ್ಯೂನಿಕೇಷನ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಜ್ಜಿಯಂದಿರಾದ ಕಮಲಾ ರಾಧಾಕೃಷ್ಣ ಮತ್ತು ವಿಜಯಾ ಅವರ ಮಾರ್ಗದರ್ಶನದಲ್ಲಿ ಬದುಕಿನ ಪಟ್ಟುಗಳನ್ನು ಕಲಿತ ಚಂದನಾ, ಅಪ್ಪ ಅಮ್ಮನಂತೆ ಸಿನಿಮಾ ಮತ್ತು ಕಿರುತೆರೆಯ ಆಳ ಅಗಲವನ್ನೂ ಅರಿತಿದ್ದಾರೆ.
2024 ರಿಂದ “ಸಹಚಾರಿ” ಎಂಬ ಭರತನಾಟ್ಯ ತಂಡದೊಂದಿಗೆ ಕರ್ನಾಟಕದಾದ್ಯಂತ ಸಾಂವಿಧಾನಿಕ ಮೌಲ್ಯಗಳನ್ನು ನೃತ್ಯದ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
