ಟಿ20 ವಿಶ್ವಕಪ್ (T20 World Cup)ನ ಸೂಪರ್ 8ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ, ವಿಶ್ವಕಪ್ ಏಕದಿನ ಪಂದ್ಯದಲ್ಲಿನ ಸೇಡು ತೀರಿಸಿಕೊಂಡಿದ್ದಾರೆ.
ಈ ಮೂಲಕ ರೋಹಿತ್ ಶರ್ಮಾ (Rohit Sharma) ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಆಸೀಸ್ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದ ಹಿಟ್ ಮ್ಯಾನ್ (Hitman) ಕೇವಲ 41 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ ಗಳಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ, ರೋಹಿತ್ ಸ್ಟ್ರೈಕ್ ರೇಟ್ 224.39 ರಷ್ಟಿತ್ತು.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಿ20 ಮಾದರಿಯ ಕ್ರಿಕೆಟ್ ನಲ್ಲಿ 200ಕ್ಕೂ ಅಧಿಕ ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಸಾಕ್ಷಿಯಾಗಿದ್ದಾರೆ. ರೋಹಿತ್ ಇಲ್ಲಿಯವರೆಗೆ ಒಟ್ಟು 203 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿಯೂ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 4165 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 4145 ಹಾಗೂ ವಿರಾಟ್ ಕೊಹ್ಲಿ 4103 ರನ್ ಗಳಿಸಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
2021ರಲ್ಲಿ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ 57 ರನ್ ಗಳಿಸಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕನ ಗರಿಷ್ಠ ಸ್ಕೋರ್ ಆಗಿತ್ತು. ಇದನ್ನು ಆಸೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಹಿಂದಿಕ್ಕಿದರು. ರೋಹಿತ್ 92 ರನ್ ಗಳಿಸಿ ಟಿ20 ವಿಶ್ವಕಪ್‌ನಲ್ಲಿ ನಾಯಕನೊಬ್ಬ ಗಳಿಸಿದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ್ದಾರೆ. 010 ರಲ್ಲಿ ಭಾರತದ ವಿರುದ್ಧ ಕ್ರಿಸ್ ಗೇಲ್ 98 ರನ್ ಗಳಿಸಿದ್ದು, ನಾಯಕನೊಬ್ಬನ ಗರಿಷ್ಠ ಸ್ಕೋರ್ ಆಗಿದೆ. ಈಗ ಈ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನ ತಲುಪಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಕೂಡ ರೋಹಿತ್ ಹೆಸರು ಸೇರ್ಪಡೆಯಾಗಿದೆ. ಈಗಾಗಲೇ ಯುವರಾಜ್ ಸಿಂಗ್, ಕೆಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್, ಗೌತಮ್ ಗಂಭೀರ್ ಈ ಪಟ್ಟಿಯಲ್ಲಿದ್ದು, ನಂತರದ ಸ್ಥಾನ ರೋಹಿತ್ ಪಾಲಾಗಿದೆ.