ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy) ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಸೋತಿರುವ ಪಾಕಿಸ್ತಾನ ತಂಡ ಮುಖಭಂಗ ಅನುಭವಿಸಿದೆ. ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿರುವ ಕಾರಣ ಆತಿಥೇಯರು ಬೇಸರದಲ್ಲಿರುವ ನಡುವೆಯೇ ಮತ್ತೊಂದು ಕಹಿ ಸುದ್ದಿ ಎದುರಾಗಿದೆ. ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ಪಾಕಿಸ್ತಾನಕ್ಕೆ ಪಂದ್ಯ ಶುಲ್ಕದ ಶೇಕಡಾ 5ರಷ್ಟು ದಂಡವನ್ನು ವಿಧಿಸಲಾಗಿದೆ.
ಮೊಹಮ್ಮದ್ ರಿಝ್ವಾನ್ ಪಡೆಯು ನಿಗದಿತ ಅವಧಿಯಲ್ಲಿ 50 ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲನಿಗದಿತ ಅವಧಿಯ ವೇಳೆಗೆ ಒಂದು ಓವರ್ ಕಡಿಮೆ ಬೌಲ್ ಮಾಡಿತ್ತು.
“ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನ ತಂಡಕ್ಕೆ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡ ವಿಧಿಸಲಾಗಿದೆ ,” ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿ ಸದಸ್ಯರಾದ ಆಂಡಿ ಪೈಕ್ರಾಫ್ಟ್, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ, ನಿಗದಿತ ಸಮಯದಲ್ಲಿ ತಂಡವು ಬೌಲ್ ಮಾಡದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡ ವಿಧಿಸಲಾಗುತ್ತದೆ. ಪಾಕಿಸ್ತಾನದ ನಾಯಕ ಮೊಹಮ್ಮದ್ ರಿಝ್ವಾನ್ ಈ ತಪ್ಪು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ವಿಚಾರಣೆಯ ಅಗತ್ಯವಿರಲಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ಶರ್ಫುದ್ದೌಲಾ, ಮೂರನೇ ಅಂಪೈರ್ ಜೋಯಲ್ ವಿಲ್ಸನ್ ಮತ್ತು ನಾಲ್ಕನೇ ಅಂಪೈರ್ ಅಲೆಕ್ಸ್ ವಾರ್ಫ್ ಈ ದೂರು ನೀಡಿದ್ದರು.
ಮೊದಲನೇ ಪಂದ್ಯದಲ್ಲೇ ಮುಖಭಂಗ
ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳ ನಿರಾಶಾದಾಯಕ ಸೋಲು ಅನುಭವಿಸಿದ್ದ ಪಾಕಿಸ್ತಾನಕ್ಕೆ ಈ ದಂಡವು ಮತ್ತೊಂದು ಬೇಸರದ ವಿಷಯವಾಗಿದೆ. 321 ರನ್‌ಗಳ ಗುರಿ ಬೆನ್ನಟ್ಟುವಾಗ ಆತಿಥೇಯರು ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು ಮತ್ತು ನಿಧಾನಗತಿಯ ಆರಂಭದ ನಂತರ ಅಗತ್ಯವಿರುವ ರನ್ ದರ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಇದಕ್ಕೂ ಮುನ್ನ ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಝಮಾನ್ ಗಾಯದ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಪಂದ್ಯದ ಎರಡನೇ ಓವರ್‌ನಲ್ಲಿ ಫೀಲ್ಡಿಂಗ್‌ನಲ್ಲಿ ತೊಡಗಿದ್ದ ವೇಳೆ ಎಡಗೈ ಬ್ಯಾಟ್ಸ್‌ಮನ್ ಗಾಯಗೊಂಡಿದ್ದರು.
ಭಾರತ ವಿರುದ್ಧ ಗೆಲ್ಲಲೇಬೇಕು
ಗಾಯಗೊಂಡಿರುವ ಫಖರ್ ಜಮಾನ್ ಬದಲಿಗೆ ಇಮಾಮ್-ಉಲ್-ಹಕ್ ಅವರಿಗೆ ಆಡಲು ಐಸಿಸಿ ಅವಕಾಶ ನೀಡಿದೆ. ಫೆಬ್ರವರಿ 23 ರಂದು ನಡೆಯುವ ಭಾರತ ವಿರುದ್ಧದ ನಿರ್ಣಾಯಕ ಪಂದ್ ಪಾಕ್ಗೆ ನಿರ್ಣಾಯಕ. ಪ್ರತಿ ಗುಂಪಿನಿಂದ ಎರಡು ತಂಡಗಳು ಮಾತ್ರ ನಾಕೌಟ್ ಹಂತಕ್ಕೆ ತಲುಪಲಿವೆ. ಬಾಂಗ್ಲಾದೇಶ ನಾಲ್ಕನೇ ತಂಡವಾಗಿದ್ದು, ನ್ಯೂಜಿಲೆಂಡ್ ಈಗಾಗಲೇ ಕರಾಚಿಯಲ್ಲಿ ತನ್ನ ಪಂದ್ಯವನ್ನು ಗೆದ್ದಿದೆ.