ಭೋಪಾಲ್ : ಮಧ್ಯಪ್ರದೇಶದ AIIMS ಭೋಪಾಲ್ ಆಸ್ಪತ್ರೆ ಆವರಣದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಬಂಗಾರದ ಚೈನ್ ಕಳ್ಳತನವಾದ ಘಟನೆ ವರದಿಯಾಗಿದೆ. ಆಸ್ಪತ್ರೆಯ ಲಿಫ್ಟ್ ಒಳಗೇ ಈ ಸರಗಳ್ಳತನ ನಡೆದಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೆಲಸದ ನಿಮಿತ್ತ ಲಿಫ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ಲಿಫ್ಟ್‌ನಲ್ಲಿ ಒಬ್ಬರೇ ಇದ್ದುದನ್ನು ಗಮನಿಸಿದ ದುಷ್ಕರ್ಮಿ, ಲಿಫ್ಟ್ ಚಲಿಸುತ್ತಿರುವ ಸಂದರ್ಭದಲ್ಲೇ ಅವರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ. ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
AIIMS ಆಸ್ಪತ್ರೆಯ ಲಿಫ್ಟ್‌ಗಳಲ್ಲಿ ಸಾಮಾನ್ಯವಾಗಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಇದ್ದರೂ, ದುಷ್ಕರ್ಮಿ ಯಾವುದೇ ಭಯವಿಲ್ಲದೆ ಈ ಕೃತ್ಯ ಎಸಗಿರುವುದು ಭದ್ರತಾ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.
ಘಟನೆಯ ಬಳಿಕ AIIMS ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳು ಆಸ್ಪತ್ರೆ ಆವರಣದಲ್ಲಿ ಭದ್ರತೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕೆಲಸದ ಸ್ಥಳದಲ್ಲೇ ಮಹಿಳಾ ಸಿಬ್ಬಂದಿಗೆ ರಕ್ಷಣೆ ಇಲ್ಲದಿದ್ದರೆ ಕೆಲಸ ನಿರ್ವಹಿಸುವುದು ಕಷ್ಟ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಹಾವೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ | ಸಗಣಿ ಎಸೆದ ಕಿಡಿಗೇಡಿಗಳು



















