ಬೆಂಗಳೂರು: ಟೀಮ್ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಮುಂಬೈ ಕೌಟುಂಬಿಕ ನ್ಯಾಯಾಲಯವು ಧನಶ್ರೀ ವರ್ಮಾ ಅವರಿಗೆ 4.75 ಕೋಟಿ ರೂ. ಜೀವನಾಂಶ ನೀಡಬೇಕು ಎಂದು ನಿರ್ದೇಶನ ನೀಡಿದೆ. ಹಾಗಾದರೆ, ದೇಶದಲ್ಲಿ ವಿಚ್ಛೇದನದ ನಿಯಮಗಳು ಏನು ಹೇಳುತ್ತವೆ? ಕೋರ್ಟ್ ಹೇಗೆ ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ? ಯಾವ ವಿಷಯಗಳನ್ನು ಪರಿಗಣಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಕಾನೂನು ಏನು ಹೇಳುತ್ತದೆ?
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಮೊದಲು ಕ್ರಿಮಿನಲ್ ಪ್ರೊಸೀಜರ್ ಕೋಡ್ ಇತ್ತು), ಹಿಂದೂ ವಿವಾಹ ಅಧಿನಿಯಮ, ವಿಶೇಷ ಮದುವೆಗಳ ಕಾಯ್ದೆ, ಕೌಂಟುಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ವಿಚ್ಛೇದನದ ವೇಳೆ ಮಹಿಳೆಯು ಪತಿಯಿಂದ ಜೀವನಾಂಶವನ್ನು ಕೋರಿ ನ್ಯಾಯಾಲಯದ ಮೊರೆ ಹೋಗಬಹುದು. ವಿಚ್ಛೇದನದ ಬಳಿಕ ಜೀವನ ನಿರ್ವಹಣೆಗಾಗಿ ಪತಿಯಿಂದ ಮಹಿಳೆಯು ಜೀವನಾಂಶ ಪಡೆಯಬಹುದು ಎಂದು ಕಾನೂನು ಹೇಳುತ್ತದೆ. ಆದರೆ, ವಿಚ್ಛೇದನ ಪಡೆದ ಮಹಿಳೆಯು ಮತ್ತೊಂದು ಮದುವೆಯಾದರೆ, ಮಾಜಿ ಪತಿಯು ಜೀವನಾಂಶ ನೀಡಬೇಕಿಲ್ಲ.
ಜೀವನಾಂಶ ನೀಡಲು ಯಾವ ಫಾರ್ಮುಲಾ ಇದೆ?
ವಿಚ್ಛೇದನ ನೀಡುವಾಗ ನ್ಯಾಯಾಲಯವು ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿಯ ಜೀವನಾಂಶ ನೀಡಬೇಕು ಎಂದು ಸೂಚಿಸುತ್ತವೆ. ಹಾಗೆ ನೋಡಿದರೆ, ವಿಚ್ಛೇದನದ ಬಳಿಕ ಪತಿಯು ಪತ್ನಿಗೆ ಜೀವನಾಂಶ ನೀಡಲು ಸಿದ್ಧ ಸೂತ್ರ ಅಥವಾ ಫಾರ್ಮುಲಾ ಇಲ್ಲ. ಗಂಡನ ದುಡಿಮೆ, ಆತನ ಆಸ್ತಿ, ಜೀವನಶೈಲಿ, ಪತ್ನಿಗೆ ಅವಶ್ಯಕತೆ ಇರುವ ಜೀವನ ವೆಚ್ಚ, ಆಕೆ ಮಕ್ಕಳನ್ನು ಸಾಕಬೇಕಾದರೆ ಎಷ್ಟು ಹಣ ಖರ್ಚಾಗಬಹುದು, ಮಕ್ಕಳ ವಯಸ್ಸು ಎಷ್ಟು ಎಂಬುದು ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಜೀವನಾಂಶವನ್ನು ನೀಡಲಾಗುತ್ತದೆ.
ಕೆಲವೊಂದು ಪ್ರಕರಣಗಳಲ್ಲಿ ಜೀವನಾಂಶದ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ಮಧ್ಯೆ ವಾಗ್ವಾದಗಳು ನಡೆಯುತ್ತವೆ. ಹೆಂಡತಿಯು ಹೆಚ್ಚಿನ ಜೀವನಾಂಶ ಕೇಳಿದರೆ, ಗಂಡ ಆಗುವುದಿಲ್ಲ ಎಂದು ಹೇಳುತ್ತಾನೆ. ಆಗ ಪತಿಯ ಹಣಕಾಸು ಸ್ಥಿತಿ ಹಾಗೂ ಪತ್ನಿ ಕೇಳಿದ ಜೀವನಾಂಶ ಮೊತ್ತವು ಎಷ್ಟು ಸಮಂಸವಾಗಿದೆ ಎಂಬುದನ್ನು ನ್ಯಾಯಾಧೀಶರು ವಿವೇಚನೆ ಬಳಸಿ ಇಷ್ಟು ಮೊತ್ತ ನೀಡಬೇಕು ಎಂದು ಸೂಚಿಸುತ್ತಾರೆ.
ಜೀವನಾಂಶ ನಿರ್ಧರಿಸಲು ಕೋರ್ಟ್ ಪರಿಗಣಿಸುವ ವಿಷಯಗಳು
- ಗಂಡ-ಹೆಂಡತಿಯ ಸಾಮಾಜಿಕ ಸ್ಥಾನಮಾನ
- ಪತಿಯ ಗಳಿಕೆ ಸಾಮರ್ಥ್ಯ, ವಿದ್ಯಾರ್ಹತೆ
- ಮದುವೆ ಬಳಿಕ ಇಬ್ಬರ ಜೀವನ ಶೈಲಿ, ಖರ್ಚು-ವೆಚ್ಚ
- ಮಹಿಳೆಯ ಉದ್ಯೋಗ, ಗಳಿಕೆ, ವಿದ್ಯಾರ್ಹತೆ
- ಮಕ್ಕಳ ಪಾಲನೆ, ಶಿಕ್ಷಣಕ್ಕಾಗಿ ತಗುಲುವ ವೆಚ್ಚ
- ಪತ್ನಿ, ಮಕ್ಕಳ ಆರೋಗ್ಯ ಸ್ಥಿತಿ, ಅಂಗವೈಕಲ್ಯದ ಪರಿಶೀಲನೆ