ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವಂತೆಯೇ, ದೇಶಾದ್ಯಂತ ಇಂಧನ ಕೊರತೆಯಾಗಬಹುದು ಎಂಬ ಆತಂಕದಿಂದ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಮುಗಿಬೀಳುತ್ತಿರುವ ದೃಶ್ಯಗಳು ದಿನೇ ದಿನೇ ವರದಿಯಾಗುತ್ತಿವೆ. ಇದರ ಜೊತೆಗೆ, ದೇಶಾದ್ಯಂತ ಕೊರೊನಾ ಸೋಂಕಿನ ಅವಧಿಯಂತೆಯೇ ಮತ್ತೊಂದು ಲಾಕ್‌ಡೌನ್ ಹೇರಲಾಗುತ್ತದೆ ಎಂಬ ವದಂತಿಗಳು ವ್ಯಾಪಕವಾಗಿ ಹಬ್ಬಿವೆ. ಈ ಹಿನ್ನೆಲೆಯಲ್ಲಿ, ಈ ಎಲ್ಲಾ ವದಂತಿಗಳನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿದ್ದು, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಪ್ರಶ್ನೆಯೇ ಇಲ್ಲ – ಸಚಿವರ ಸ್ಪಷ್ಟನೆ
ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಹೇರಲಾಗುತ್ತದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ವದಂತಿಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು. ಅಂತಹ ಯಾವುದೇ ನಿರ್ಧಾರ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದಿದ್ದಾರೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಎಲ್ಲ ನಾಗರಿಕರು ಶಾಂತಿಯಿಂದ, ಜವಾಬ್ದಾರಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವುದು ಅತ್ಯಗತ್ಯ ಎಂದು ಅವರು ಮನವಿ ಮಾಡಿದ್ದಾರೆ.
ಇಂಧನ ಪೂರೈಕೆಗೆ ಧಕ್ಕೆಯಿಲ್ಲ
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಪ್ರಮುಖ ಇಂಧನ ಕಾರಿಡಾರ್ ಆಗಿರುವ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ, ಪೆಟ್ರೋಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಬಹುದು ಎಂಬ ಭೀತಿಯಿಂದ ಜನರು ಆತಂಕಗೊಂಡು ಖರೀದಿಗೆ ಮುಗಿಬಿದ್ದಿದ್ದಾರೆ. ಆದರೆ, ದೇಶದ ಇಂಧನ ಭದ್ರತೆ ಸುಭದ್ರವಾಗಿದೆ ಎಂದು ಸಚಿವ ಪುರಿ ಅಭಯ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾಗರಿಕರಿಗೆ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎದುರಾಗುವ ಯಾವುದೇ ಹೊಸ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದಿದ್ದಾರೆ.
ದೇಶದ ಇಂಧನ ಪರಿಸ್ಥಿತಿಯ ಕುರಿತು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಗಳ ನಡುವೆಯೂ ನಾಗರಿಕರು ಭಯಪಡುವ ಅಗತ್ಯವಿಲ್ಲ. ಲಭ್ಯವಿರುವ ಎಲ್ಲ ಮೂಲಗಳಿಂದ ಅನಿಲ ಮತ್ತು ಕಚ್ಚಾ ತೈಲವನ್ನು ಖರೀದಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ನಿರಂತರ ಯತ್ನಗಳು ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಬಾರ್ಡರ್-ಗವಾಸ್ಕರ್ ಟ್ರೋಫಿ 2027 | ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳಾಪಟ್ಟಿ ಇಲ್ಲಿದೆ!



















