ಬೆಂಗಳೂರು : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆಗೆ ಚಾಲನೆ ನೀಡಿದೆ. ಎನ್ ಪಿಎಸ್ ಸ್ವಾಸ್ಥ್ಯ ಪಿಂಚಣಿ (Swasthya Pension Scheme) ಎಂಬ ಹೊಸ ಯೋಜನೆಯನ್ನು ಆರಂಭಿಸಿದ್ದು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್) ಸದಸ್ಯರು ಆರೋಗ್ಯ ವಿಮೆ ಖಾತೆಗೆ ನಿಯಮಿತವಾಗಿ ಹಣವನ್ನು ವರ್ಗಾವಣೆ ಮಾಡುವ ಮೂಲಕ ಒಂದೇ ಯೋಜನೆಯಲ್ಲಿ ವಿಮೆ ಹಾಗೂ ಪಿಂಚಣಿಯನ್ನು ಪಡೆಯಬಹುದಾಗಿದೆ.
ನಿವೃತ್ತಿಯ ನಂತರ ಎನ್ ಪಿಎಸ್ ಸದಸ್ಯರು ಆರ್ಥಿಕ ಭದ್ರತೆಯ ಜತೆಗೆ ಆರೋಗ್ಯ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಹೊಸ ಯೋಜನೆ ಜಾರಿಗೆ ತಂದಿದೆ. ಪಿಂಚಣಿಯ ಜತೆಗೆ ಆರೋಗ್ಯ ಸಂಬಂಧಿತ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ. ಎನ್ ಪಿಎಸ್ ಸದಸ್ಯರು ತಮ್ಮ ಚಿಕಿತ್ಸಾ ವೆಚ್ಚಗಳಿಗಾಗಿ ಉಳಿತಾಯ ಮಾಡಲು ಇದು ಅನುವು ಮಾಡಿಕೊಡುತ್ತದೆ.
ಭಾರತದ ಯಾವುದೇ ನಾಗರಿಕರು ಈ ಯೋಜನೆಗೆ ಸೇರಬಹುದು. ಇದಕ್ಕಾಗಿ ‘ಸಾಮಾನ್ಯ ಯೋಜನೆ ಖಾತೆ’ (Common Scheme Account) ಇರುವುದು ಕಡ್ಡಾಯ. ವೈದ್ಯಕೀಯ ವೆಚ್ಚಗಳಿಗಾಗಿ ಚಂದಾದಾರರು ತಮ್ಮ ಕೊಡುಗೆಯ 25% ರಷ್ಟು ಹಣವನ್ನು ಹಿಂಪಡೆಯಬಹುದು. ಕನಿಷ್ಠ 50 ಸಾವಿರ ರೂಪಾಯಿ ಮೊತ್ತ ಸಂಗ್ರಹವಾದ ನಂತರ ಮಾತ್ರ ಮೊದಲ ಬಾರಿಗೆ ಹಣ ಪಡೆಯಲು ಅವಕಾಶವಿರುತ್ತದೆ.
ಗಂಭೀರ ಕಾಯಿಲೆಯ ಚಿಕಿತ್ಸಾ ವೆಚ್ಚವು ಒಟ್ಟು ಉಳಿತಾಯದ 70% ಕ್ಕಿಂತ ಹೆಚ್ಚಿದ್ದರೆ, ಚಿಕಿತ್ಸೆಗಾಗಿ 100% ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಹಾಗೆಯೇ, 40 ವರ್ಷ ಮೇಲ್ಪಟ್ಟ ಚಂದಾದಾರರು ತಮ್ಮ ಸಾಮಾನ್ಯ ಎನ್ ಪಿಎಸ್ ಖಾತೆಯಿಂದ 30%ವರೆಗಿನ ಮೊತ್ತವನ್ನು ಈ ‘ಸ್ವಾಸ್ಥ್ಯ ಪಿಂಚಣಿ’ ಖಾತೆಗೆ ವರ್ಗಾಯಿಸಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ನಾಳೆ 9ನೇ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.. ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜು!



















