ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡು, ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ದ್ವಿಪಕ್ಷೀಯ ಮಾತುಕತೆ ಜತೆಗೆ ವ್ಯಾಪಾರ ಒಪ್ಪಂದಗಳ ದೃಷ್ಟಿಯಿಂದಲೂ ಮೋದಿ ಭೇಟಿಯು ಫಲಪ್ರದವಾಗಿದೆ. ಇದೇ ವೇಳೆ, ಕೇಂದ್ರ ಸರ್ಕಾರವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಬಾರ್ಬನ್ ವಿಸ್ಕಿಯ ಮೇಲಿನ ಆಮದು ಸುಂಕವನ್ನು ಶೇ.150ರಿಂದ ಶೇ.100ಕ್ಕೆ ಇಳಿಕೆ ಮಾಡಿದೆ. ಹಾಗಾಗಿ ಇದು ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಎನಿಸಿದೆ.
ಭಾರತ-ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಬಾರ್ಬನ್ ವಿಸ್ಕಿಯ ಆಮದು ಸುಂಕವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಸುಂಟೋರಿಯಾ ಜಿಮ್ ಬೀಮ್ ನಂತಹ ವಿಸ್ಕಿಯ ಬೆಲೆಯಲ್ಲಿ ಇಳಿಕೆಯಾಗಲಿದೆ. ಕೇಂದ್ರ ಸರ್ಕಾರವು ಇದೊಂದೇ ವಿಸ್ಕಿಯ ಮೇಲಿನ ಸುಂಕವನ್ನು ಇಳಿಕೆ ಮಾಡಿದೆ. ಉಳಿದ ಮದ್ಯದ ಮೇಲೆ ಶೇ.100ರಷ್ಟು ಶುಲ್ಕವು ಮುಂದುವರಿಯಲಿದೆ.
ಭಾರತ ಆಮದು ಮಾಡಿಕೊಳ್ಳುವ ವಿಸ್ಕಿಯಲ್ಲಿ ಅಮೆರಿಕದ ಬಾರ್ಬನ್ ವಿಸ್ಕಿಯ ಆಮದು ಪ್ರಮಾಣವೇ ಶೇ.25ರಷ್ಟು ಇರುವುದರಿಂದ, ಭಾರತದಲ್ಲಿ ಕೋಟ್ಯಂತರ ಜನ ಇದನ್ನು ಸೇವಿಸುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಭಾರತವು 2023-24ರಲ್ಲಿ ಅಮೆರಿಕದಿಂದ 2.5 ದಶಲಕ್ಷ ಡಾಲರ್ ಮೊತ್ತದ ಬಾರ್ಬನ್ ವಿಸ್ಕಿಯನ್ನು ಆಮದು ಮಾಡಿಕೊಂಡಿತ್ತು.
ಅಮೆರಿಕ ಭೇಟಿಯ ವೇಳೆ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಶ್ವೇತಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕ 2030ರ ವೇಳೆಗೆ ತಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಿ, 500 ಶತಕೋಟಿ ಡಾಲರ್ ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಘೋಷಿಸಿದ್ದಾರೆ.