ನವದೆಹಲಿ: ದೇಶದಲ್ಲಿನ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ರಾಜ್ಯಸಭೆಯಲ್ಲಿ ಮೋದಿ ಸರ್ಕಾರವು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ (MSP) ಖರೀದಿಸಲಿದೆ ಎಂದು ಹೇಳಿದ್ದಾರೆ. ರೈತರ ಪ್ರತಿಭಟನೆಯ ನಂತರ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ರೈತರ ಎಲ್ಲ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ನಾನು ನಿಮ್ಮ ಮೂಲಕ ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿ ಸರ್ಕಾರ ಮತ್ತು ಮೋದಿ ಅವರ ಭರವಸೆ ಎಂದಿದ್ದಾರೆ.
ಪ್ರತಿಪಕ್ಷಗಳು ಎಂದಿಗೂ ರೈತರನ್ನು ಗೌರವಿಸಿಲ್ಲ. 2019 ರಿಂದ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ. 50ರಷ್ಟು ಲಾಭವನ್ನು ನೀಡುವ ಮೂಲಕ ಕನಿಷ್ಠ ಬೆಂಬಲ ಬೆಲೆಯನ್ನು ಲೆಕ್ಕಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಭತ್ತ, ಜೋಳ, ಗೋಧಿ ಮತ್ತು ಸೋಯಾಬೀನ್ ಅನ್ನು ಉತ್ಪಾದನಾ ವೆಚ್ಚಕ್ಕಿಂತ 50 ಪ್ರತಿಶತದಷ್ಟು ಹೆಚ್ಚು ಖರೀದಿಸಲಾಗಿದೆ ಎಂದು ಹೇಳಿದ್ದಾರೆ.