ತಿರುವನಂತಪುರಂ: ಕೇಂದ್ರ ಅಬಕಾರಿ ಮತ್ತು ಜಿಎಸ್ಟಿಯ ಹೆಚ್ಚುವರಿ ಆಯುಕ್ತರು, ಅವರ ತಾಯಿ ಮತ್ತು ಸಹೋದರಿ ಕೇರಳದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರೆಲ್ಲರೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಾಲ್ಕು ದಿನಗಳ ಕಾಲ ರಜೆ ಪಡೆದು ಹೋಗಿದ್ದ ಅಧಿಕಾರಿ ಮನೀಶ್ ವಿಜಯ್ ಅವರು, 4 ದಿನ ಕಳೆದರೂ ಕೆಲಸಕ್ಕೆ ಮರಳದ ಕಾರಣ ವಿಚಾರಿಸಲೆಂದು ಸಹೋದ್ಯೋಗಿಗಳು ಅವರ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೀಶ್ ಮನೆಗೆ ತಲುಪಿದಾಗ ಒಳಗಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅನುಮಾನಗೊಂಡ ಸಹೋದ್ಯೋಗಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮನೆಯ ಬಾಗಿಲು ಒಡೆದು ಒಳಹೊಕ್ಕು ನೋಡಿದಾಗ, ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ತಾಯಿ ಶಕುಂತಳಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ತಾಯಿ ಶಕುಂತಳಾ ಅವರ ಮೃತದೇಹದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸಲಾಗಿತ್ತು. ಜೊತೆಗೆ ಸುತ್ತಲೂ ಹೂವುಗಳನ್ನು ಇರಿಸಲಾಗಿತ್ತು. ಹೀಗಾಗಿ, ಒಂದೋ ತಾಯಿ ಮೊದಲೇ ಮೃತಪಟ್ಟಿರಬಹುದು ಅಥವಾ ಅವರನ್ನು ಮೊದಲು ಕೊಂದು, ನಂತರ ಸಹೋದರ-ಸಹೋದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂವರೂ ಮೃತಪಟ್ಟು ಕೆಲವು ದಿನಗಳು ಕಳೆದಿದ್ದು, ಈಗಾಗಲೇ ಕೊಳೆಯಲು ಪ್ರಾರಂಭಿಸಿವೆ ಎಂದು ಕೊಚ್ಚಿ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ತಿಳಿಸಿದ್ದಾರೆ. “ವಿಧಿವಿಜ್ಞಾನ ಪರೀಕ್ಷೆಯ ನಂತರವೇ, ಅವರು ಯಾವಾಗ ಮೃತಪಟ್ಟಿರಬಹುದು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯ” ಎಂದಿದ್ದಾರೆ.
ಮನೆಯ ಕೋಣೆಯೊಂದರಲ್ಲಿ ಡೈರಿಯೊಂದು ಪತ್ತೆಯಾಗಿದೆ. ಅದರಲ್ಲಿ, ವಿದೇಶದಲ್ಲಿ ವಾಸಿಸುತ್ತಿರುವ ನಮ್ಮ ಸಹೋದರಿಗೆ ಈ ಸಾವಿನ ಬಗ್ಗೆ ತಿಳಿಸಬೇಕು ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಜಾರ್ಖಂಡ್ ಮೂಲದ ಈ ಕುಟುಂಬವು ಕೇರಳದ ಎರ್ನಾಕುಲಂ ಜಿಲ್ಲೆಯ ಕಕ್ಕನಾಡ್ ಕಸ್ಟಮ್ಸ್ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿತ್ತು.ಒಂದೂವರೆ ವರ್ಷದ ಹಿಂದೆ ಕೊಚ್ಚಿಗೆ ವರ್ಗಾವಣೆಯಾಗಿದ್ದ ಮನೀಶ್ ಅವರು ಅದಕ್ಕೂ ಮೊದಲು ಕೋಯಿಕ್ಕೋಡ್ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ತಾಯಿ ಮತ್ತು ಸಹೋದರಿ ಕೆಲವು ತಿಂಗಳ ಹಿಂದಷ್ಟೇ ಮನೀಶ್ ರೊಂದಿಗೆ ಕೊಚ್ಚಿಗೆ ಸ್ಥಳಾಂತರಗೊಂಡಿದ್ದರು. ಶಾಲಿನಿ ಅವರು ಜಾರ್ಖಂಡ್ನಲ್ಲಿ ಯಾವುದೋ ಕಾನೂನು ಪ್ರಕರಣವನ್ನು ಎದುರಿಸುತ್ತಿದ್ದರು. ಇದೇ ಕಾರಣಕ್ಕೆ ಮನೀಶ್ 4 ದಿನ ರಜೆ ತೆಗೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಿನಿ ಅವರು 2006ರ ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್ಸಿ) ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದಿದ್ದರು. ನಂತರ ಅವರು ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕಗೊಂಡಿದ್ದರು. ಆದರೆ, ಬಳಿಕ ಅವರ ರಾಂಕ್ ಗೆ ಸಂಬಂಧಿಸಿ ಕಾನೂನು ಸಮಸ್ಯೆ ಉದ್ಭವಿಸಿದ ಕಾರಣ, ಅವರ ಶ್ರೇಣಿಯನ್ನೇ ರದ್ದುಗೊಳಿಸಲಾಯಿತು. ಹೀಗಾಗಿ ಅವರು ಹುದ್ದೆಯಿಂದ ವಜಾಗೊಂಡರು. 2024ರಲ್ಲಿ, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿ, ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಈ ಪ್ರಕರಣ ಸಂಬಂಧದ ವಿಚಾರಣೆ ಪ್ರಸ್ತುತ ಕೋರ್ಟ್ ನಲ್ಲಿತ್ತು ಎಂದು ಹೇಳಲಾಗಿದೆ.
ಇನ್ನು, ವಿದೇಶದಿಂದ ಅವರ ಸೋದರಿ ಬಂದ ಬಳಿಕವಷ್ಟೇ ಶವಗಳ ಮರಣೋತ್ತರ ಪರೀಕ್ಷೆ ಪ್ರಾರಂಭವಾಗಲಿದೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.