ನವದೆಹಲಿ: ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ವಕ್ಫ್ (ತಿದ್ದುಪಡಿ) ಮಸೂದೆ ಮಂಡನೆಗೆ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪಗಳಲ್ಲಿ ಕೇಂದ್ರ ಸರ್ಕಾರವು ಮಸೂದೆಯನ್ನು ಮಂಡನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಮಸೂದೆಗೆ ಅಂಗೀಕಾರ ಸಿಕ್ಕರೆ ವಕ್ಫ್ ಕಾಯ್ದೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತದೆ.
ವಕ್ಫ್ ಕಾಯ್ದೆಯಲ್ಲಿ ಹಲವು ಬದಲಾವಣೆಗಳು ಆಗಬೇಕು ಎಂದು ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ವರದಿ ಸಲ್ಲಿಸಿತ್ತು. ಅದರಂತೆ ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ-2024ಕ್ಕೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ವಕ್ಫ್ ಕಾಯ್ದೆ ತಿದ್ದುಪಡಿಗೆ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಏನೆಲ್ಲ ಬದಲಾವಣೆ?
ವಕ್ಫ್ ಕಾಯ್ದೆಗೆ 14 ಪ್ರಮುಖ ಮಾರ್ಪಾಡುಗಳನ್ನು ಮಾಡಿ, ಸುಮಾರು 44 ತಿದ್ದುಪಡಿಗಳನ್ನು ಜಾರಿಗೆ ತರಲು ಜೆಪಿಸಿ ಸಮಿತಿಯು ಶಿಫಾರಸು ಮಾಡಿದೆ. ದೇಶದ ಯಾವುದೇ ಆಸ್ತಿ, ಜಾಗವನ್ನು ವಕ್ಫ್ ಆಸ್ತಿ ಎಂಬುದಾಗಿ ಘೋಷಿಸುವ ಪರಮಾಧಿಕಾರದ ಬದಲಾವಣೆ ಸೇರಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಕೇಂದ್ರ ಹಾಗೂ ರಾಜ್ಯ ವಕ್ಫ್ ಮಂಡಳಿಗಳು ಈಗಿರುವ ಪರಮಾಧಿಕಾರವನ್ನು ಕಳೆದುಕೊಳ್ಳಲಿವೆ. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ಸಾಧ್ಯವಾಗುವುದಿಲ್ಲ ಹಾಗೂ ಹಾಗೆ ಘೋಷಣೆ ಮಾಡಲು ನಿಖರ ದಾಖಲೆ ಇರಬೇಕು ಎಂಬುದಾಗಿ ಹೊಸ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಕ್ಫ್ ಆಸ್ತಿಗಳ ನಿರ್ವಹಣೆಗೆ ಇದರಿಂದ ಹೆಚ್ಚಿನ ನಿಯಮಗಳು ಅನ್ವಯವಾಗಲಿವೆ. 1995ರಲ್ಲಿ ವಕ್ಫ್ ಕಾಯ್ದೆ ಜಾರಿಗೆ ತಂದಿದ್ದು, ಇದರಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಹಾಗೆಯೇ, ವಕ್ಫ್ ಆಸ್ತಿಯ ನಿರ್ವಹಣೆಯಲ್ಲಿ ದಕ್ಷತೆ ತರುವುದು ಕೂಡ ಕೇಂದ್ರದ ಉದ್ದೇಶವಾಗಿದೆ. ಇದೇ ಕಾರಣಕ್ಕೆ, ಕೇಂದ್ರ ವಕ್ಫ್ ಸಮಿತಿ ಹಾಗೂ ರಾಜ್ಯಗಳ ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಸದಸ್ಯರಾಗಿರಬೇಕು ಎಂಬುದನ್ನು ಕೂಡ ನೂತನ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇಸ್ಲಾಂ ಧರ್ಮದಲ್ಲೇ ಅತಿ ಹಿಂದುಳಿದ ಸಮುದಾಯದವರು ಕೂಡ ಸಮಿತಿಯಲ್ಲಿ ಸದಸ್ಯರಾಗಬಹುದಾಗಿದೆ.