ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (EPFO) 7 ಕೋಟಿಗೂ ಅಧಿಕ ಸದಸ್ಯರಿಗೆ ಅನುಕೂಲವಾಗುವ ದಿಸೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ (ಸಿಬಿಟಿ) 2025-26ನೇ ಸಾಲಿನಲ್ಲಿ ಶೇ.8.25ರಷ್ಟು ಬಡ್ಡಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಇಪಿಎಫ್ಒ ಸದಸ್ಯರು 2025-26ನೇ ಸಾಲಿನಲ್ಲಿ ಪಿಎಫ್ ಮೊತ್ತದ ಮೇಲೆ ಶೇ.8.25ರಷ್ಟು ಬಡ್ಡಿಯ ಲಾಭ ದೊರೆಯಲಿದೆ.
2020-21ನೇ ಹಣಕಾಸು ವರ್ಷದಲ್ಲಿ ಶೇ.8.50ರಷ್ಟು ಬಡ್ಡಿ ನೀಡಲಾಗುತ್ತಿತ್ತು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021-22ನೇ ಹಣಕಾಸು ಸಾಲಿನಲ್ಲಿ ಬಡ್ಡಿ ದರವನ್ನು ಶೇ.8.10ಕ್ಕೆ ಇಳಿಸಲಾಯಿತು. ಇದಾದ ಬಳಿಕ 2022-23ನೇ ಹಣಕಾಸು ವರ್ಷದಲ್ಲಿ ಬಡ್ಡಿಯನ್ನು ಶೇ.8.15ಕ್ಕೆ ಏರಿಸಲಾಯಿತು. ಅಲ್ಲದೆ, 2023-24ನೇ ಹಣಕಾಸು ವರ್ಷದಲ್ಲಿ ಶೇ.8.25ಕ್ಕೆ ಏರಿಸಲಾಯಿತು.
2023-24, 2024-25ನೇ ಸಾಲಿನಲ್ಲಿ ಇಪಿಎಫ್ಒ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಳೆದ 2 ಹಣಕಾಸು ವರ್ಷದಲ್ಲಿ ಶೇ.8.25ರಷ್ಟು ಬಡ್ಡಿದರ ನೀಡಲಾಗಿತ್ತು. ಈಗ ಇದೇ ಬಡ್ಡಿ ದರವನ್ನು ಕೂಡ ಶೇ.8.25ರಷ್ಟು ನೀಡಲು ಸಿಬಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಖಾಸಗಿ ಉದ್ಯೋಗಿಗಳು ನಿವೃತ್ತಿ ನಿಧಿ ರಚಿಸಲು ಇಪಿಎಫ್ಒ ಪ್ರಮುಖ ಸಂಸ್ಥೆಯಾಗಿದೆ. ಪ್ರತಿ ವರ್ಷ ಸದಸ್ಯರ ಪಿಎಫ್ ಮೊತ್ತವನ್ನು ಆಧರಿಸಿ ಶೇ.8.25ರಷ್ಟು ಬಡ್ಡಿದರ ನೀಡುತ್ತದೆ. ಇಪಿಎಫ್ಒ ಸಂಸ್ಥೆಯು ಸದಸ್ಯರ 28.34 ಲಕ್ಷ ಕೋಟಿ ರೂಪಾಯಿಯನ್ನು ನಿಭಾಯಿಸುತ್ತದೆ. 2025-26ನೇ ಸಾಲಿನ ಪಿಎಫ್ ಬಡ್ಡಿಯನ್ನು ಮುಂದಿನ ಕೆಲವೇ ತಿಂಗಳಲ್ಲಿ ಜಮೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಜುಲೈ-ಆಗಸ್ಟ್ ನಲ್ಲಿ ಬಡ್ಡಿ ಹಣ ಜಮೆಯಾಗಿತ್ತು.
ಇದನ್ನೂ ಓದಿ : ಕೇಂದ್ರ ಸರ್ಕಾರದ ECHS ಸಂಸ್ಥೆಯಲ್ಲಿ 58 ಹುದ್ದೆಗಳ ನೇಮಕಾತಿ.. ಬೆಳಗಾವಿಯಲ್ಲೇ ಕೆಲಸ!



















